ಮಾದಾರ ಚನ್ನಯ್ಯ ಪೀಠ ತ್ಯಜಿಸುವಂತೆ ಒತ್ತಾಯ

ದಾವಣಗೆರೆ, ಫೆ. 28- ಬುದ್ಧ, ಬಸವ, ಅಂಬೇಡ್ಕರ್ ಅವರ ಆದರ್ಶ ಪಾಲಿಸದೇ ಮನು ಸಂಸ್ಕೃತಿ ಪಾಲನೆ ಮಾಡುತ್ತಿರುವ ಚಿತ್ರದುರ್ಗ ಮಾದಾರ ಚನ್ನಯ್ಯ ಗುರುಪೀಠದ ಪೀಠಾಧ್ಯಕ್ಷರು ಪೀಠ ತ್ಯಜಿಸುವಂತೆ ಮಾದಿಗರ ಸಾಂಸ್ಕೃತಿಕ ಸಂಘ ಒತ್ತಾಯಿಸಿದೆ. 

ಪೀಠಾಧ್ಯಕ್ಷ ವಿರುದ್ಧ ಮಾರ್ಚ 10 ರಂದು ಚಿತ್ರದುರ್ಗದಲ್ಲಿ ಸಮಾಜ ಬಾಂಧವರಿಂದ  ಮುಕ್ತ ಸಂವಾದ ಹಮ್ಮಿಕೊಂಡಿದ್ದೇವೆ ಎಂದು ಸಂಘದ ರಾಜ್ಯಾಧ್ಯಕ್ಷ ಪ್ರೊ.ಸಿ.ಕೆ. ಮಹೇಶ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಚಿತ್ರದುರ್ಗ ಮಾದಾರ ಪೀಠದ ಪೀಠಾಧ್ಯಕ್ಷರ ನಡವಳಿಕೆಗಳು ಬುದ್ಧ, ಬಸವ, ಅಂಬೇಡ್ಕರ್ ವಿಚಾರಗಳಿಗೆ ವಿರುದ್ಧವಾಗಿವೆ. ಮಠ ಸ್ಥಾಪನೆ ಮಾಡಿದಾಗ ಹಾಗೂ ಪೀಠಕ್ಕೆ ಮುಖ್ಯಸ್ಥರಾದ ವೇಳೆ ಸಮಾಜದ ಅಭಿವೃದ್ಧಿಗೆ ಬದ್ಧರಾಗಿ ಕೆಲಸ ಮಾಡುವುದಾಗಿ ಮಠದ ನೇತೃತ್ವ ವಹಿಸಿಕೊಂಡಿದ್ದರು. ಬುದ್ಧ, ವಚನಕಾರರ ಆಶಯ ಅನುಷ್ಠಾನಗೊಳಿಸುವುದು ಸೇರಿದಂತೆ ಸಮಾಜವನ್ನು ಮುಖ್ಯ ವಾಹಿನಿಗೆ ತರುವುದಾಗಿತ್ತು. ಆದರೆ ಪೀಠಾಧ್ಯಕ್ಷರು ಬ್ರಾಹ್ಮಣ ಪರಂಪರೆಗೆ ಒಳಗಾಗುತ್ತಿದ್ದಾರೆ. ಬುದ್ಧ, ಬಸವಣ್ಣ ಹಾಗೂ ಅಂಬೇಡ್ಕರ್ ತತ್ವಾದರ್ಶಗಳಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಪೀಠಾಧ್ಯಕ್ಷರು ಆರ್‌ಎಸ್‌ಎಸ್ ಹಾಗೂ ಬಿಜೆಪಿ ವಕ್ತಾರರಂತೆ ವರ್ತಿಸುತ್ತಿದ್ದಾರೆ. ಪ್ರೊ. ಬಿ. ಕೃಷ್ಣಪ್ಪ ಅವರ ಮಾರ್ಗದರ್ಶನದಲ್ಲಿ ದಲಿತ ಸಂಘಟನೆಗಳು ಅನ್ಯಾಯದ ಪರವಾಗಿ ದನಿ ಎತ್ತುತ್ತಾ ಮಾದಿಗ ಸಮಾಜದ ಅಭಿವೃದ್ಧಿಗೆ ಮುನ್ನುಡಿ ಹಾಕಿದ್ದರು. ಆದರೆ ಪೀಠಾಧ್ಯಕ್ಷರು ಇದರ ವಿರುದ್ಧ ಇರುವುದರಿಂದ ಪೀಠ ತ್ಯಜಿಸಿ ತಮ್ಮ ವೈಯಕ್ತಿಕ ಹಿತಾಸಕ್ತಿಗೆ ಮುಂದಾಗಲಿ. ಆದರೆ ಸಮಾಜದ ಹೆಸರು ಹೇಳಿಕೊಂಡು ಬಂದರೆ ಸಹಿಸುವುದಿಲ್ಲ ಎಂದರು.

ಅನೇಕ ಬಾರಿ ಶ್ರೀಗಳಿಗೆ ಮುಖಾಮುಖಿ ಭೇಟಿಯಾಗಿ ಶರಣರ ಆಲೋಚನೆಗಳಿಗೆ ವಿರುದ್ಧವಾಗಿ ನಡೆದುಕೊಳ್ಳಬಾರದು ಎಂದು ಹೇಳಿದ್ದೆವು. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಅದಕ್ಕಾಗಿ ಮಾರ್ಚ್‌ 10 ರಂದು ಚಿತ್ರದುರ್ಗದ ಪತ್ರಿಕಾ ಭವನದಲ್ಲಿ ಬೆಳಿಗ್ಗೆ 11 ಕ್ಕೆ ಮುಕ್ತ ಸಂವಾದ ಹಮ್ಮಿಕೊಳ್ಳಲಾಗಿದೆ. ಈ ಸಂವಾದದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಸಮಾಜ ಬಾಂಧವರು ಆಗಮಿಸಲಿದ್ದಾರೆಂದರು.

ಪತ್ರಿಕಾಗೋಷ್ಠಿಯಲ್ಲಿ ಕೆ. ಕುಮಾರ್, ಎಂ. ಹನುಮಂತಪ್ಪ, ಡಿ. ದುರುಗೇಶ್, ಎಂ. ಮಲ್ಲಿಕಾರ್ಜುನ್, ಕೆ.ಎಂ. ಅಂಜಿನಪ್ಪ, ಕೆ. ರುದ್ರಪ್ಪ, ಹೆಚ್.ಸಿ. ಮಲ್ಲಪ್ಪ, ಪರಶುರಾಮ್ ಉಪಸ್ಥಿತರಿದ್ದರು. 

error: Content is protected !!