ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ನಾಸೀರ್ ಹುಸೇನ್ ವಜಾಕ್ಕೆ ಒತ್ತಾಯ

ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ನಾಸೀರ್ ಹುಸೇನ್ ವಜಾಕ್ಕೆ ಒತ್ತಾಯ

ನಗರದಲ್ಲಿ ಬಿಜೆಿಪಿ ಪ್ರತಿಭಟನೆ

ದಾವಣಗೆರೆ, ಫೆ. 28- ರಾಜ್ಯಸಭಾ ಸದಸ್ಯರಾಗಿ ನೂತನವಾಗಿ ಆಯ್ಕೆಯಾದ ಕಾಂಗ್ರೆಸ್ ಪಕ್ಷದ ನಾಸೀರ್ ಹುಸೇನ್ ಬೆಂಬಲಿಗರು ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿರುವುದು ದೇಶ ವಿರೋಧಿ ಕೃತ್ಯವಾಗಿದ್ದು, ಈ ಕೂಡಲೇ ದೇಶದ್ರೋಹಿಗಳನ್ನು ಬಂಧಿಸಬೇಕು. ನಾಸೀರ್ ಹುಸೇನ್ ಅವರನ್ನು ಸದಸ್ಯ ಸ್ಥಾನದಿಂದ ವಜಾಗೊಳಿಸಬೇಕೆಂದು ಒತ್ತಾಯಿಸಿ ಬಿಜೆಪಿ ಜಿಲ್ಲಾ ಯುವ ಮೋರ್ಚಾ ವತಿಯಿಂದ ನಗರದ ನಿಜಲಿಂಗಪ್ಪ ಬಡಾವಣೆಯಲ್ಲಿನ ಅಮರ್ ಜವಾನ್ ಉದ್ಯಾನವನದ ಮುಂಭಾಗ ಪ್ರತಿಭಟನೆ ನಡೆಸಲಾಯಿತು.

ನಂತರ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರಾದರೂ ಪೊಲೀಸರು 40 ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಬಂಧಿಸಿ, ಡಿಎಆರ್ ಮೈದಾನಕ್ಕೆ ಕರೆದೊಯ್ದು ನಂತರ ಬಿಡುಗಡೆ ಮಾಡಿದರು.

ಪ್ರತಿಭಟನೆ ವೇಳೆ ಮಾತನಾಡಿದ ಬಿಜೆಪಿ ಜಿಲ್ಲಾ ರೈತ ಮುಖಂಡ ಕೊಳೇನಹಳ್ಳಿ ಬಿ.ಎಂ. ಸತೀಶ್ ಅವರು, ನಾಸೀರ್ ಹುಸೇನ್ ಬೆಂಬಲಿಗರು ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿರುವುದು ದೇಶ ವಿರೋಧಿ ಕೃತ್ಯವಾಗಿದ್ದು, ಇದನ್ನು ಪ್ರಶ್ನಿಸಿದ ಮಾಧ್ಯಮ ಪ್ರತಿನಿಧಿಗಳ ಮೇಲೂ ದರ್ಪ ತೋರಿ, ಅಸಭ್ಯವಾಗಿ ವರ್ತಿಸಿರುವುದು ಸಲ್ಲದು. ಇದೊಂದು ಅನಾಗರಿಕ ಪ್ರವೃತ್ತಿ ಎಂದು ಕಿಡಿಕಾರಿದರು.

ಯುವ ಮೋರ್ಚಾ ಮುಖಂಡ ರಾಜನಹಳ್ಳಿ ಶಿವಕುಮಾರ್ ಮಾತನಾಡಿ, ಕಾಂಗ್ರೆಸ್ ಪಕ್ಷ ದೇಶಕ್ಕೆ ಅಂಟಿಕೊಂಡಿರುವ ಮಾರಕ ಕಾಯಿಲೆ ಇದ್ದಂತೆ. ಅದರಲ್ಲೂ ದೇಶ ದ್ರೋಹದ ಕೆಲಸ ಇದಾಗಿದೆ. ಇಂತಹ ಖದೀಮರು ಕರ್ನಾಟಕದಿಂದ ಆಯ್ಕೆಯಾಗಿರುವುದು ಇಡೀ ಕನ್ನಡ ನಾಡಿನ ಜನತೆ ತಲೆ ತಗ್ಗಿಸುವಂತಾಗಿದೆ. ತಕ್ಷಣ ಕಾಂಗ್ರೆಸ್ ಪಕ್ಷ ಇಂತಹ ದೇಶ ದ್ರೋಹಿ ಚಟುವಟಿಕೆಗಳ ಬಗ್ಗೆ ತನ್ನ ನಿಲುವೇನು  ಎಂಬುದನ್ನು ಸ್ಪಷ್ಟಪಡಿಸಬೇಕೆಂದು ಒತ್ತಾಯಿಸಿದರು.

ಆರ್.ಎಲ್. ಶಿವಪ್ರಕಾಶ್, ನಾಸೀರ್ ಅಹ್ಮದ್, ಟಿಪ್ಪುಸುಲ್ತಾನ್ ಮಾತನಾಡಿದರು. ಪ್ರತಿಭಟನೆಯಲ್ಲಿ ಯುವ ಮುಖಂಡರಾದ ಜಿ.ಎಸ್. ಶ್ಯಾಮ್, ಹೆಚ್.ಪಿ ವಿಶ್ವಾಸ್, ಶಿವನಗೌಡ ಪಾಟೀಲ್, ಪಿ.ಸಿ. ಶ್ರೀನಿವಾಸ್, ಧನುಷ್, ಕಿಶೋರ್ ಕುಮಾರ್, ಅತಿಥ್ ಅಂಬರ್‌ಕರ್, ಅಣಬೇರು ನಂದಕುಮಾರ್, ರಾಜೇಶ್ವರಿ ಟಿಂಕರ್ ಮಂಜಣ್ಣ ಮತ್ತಿತರರು ಪಾಲ್ಗೊಂಡಿದ್ದರು. 

error: Content is protected !!