ಮಾರಕ ಕೃಷಿ ಕಾಯ್ದೆಗಳ ರದ್ಧತಿಗೆ ಆಗ್ರಹಿಸಿ ರೈತ ಸಂಘದ ಪ್ರತಿಭಟನೆ

ಮಾರಕ ಕೃಷಿ ಕಾಯ್ದೆಗಳ ರದ್ಧತಿಗೆ ಆಗ್ರಹಿಸಿ ರೈತ ಸಂಘದ ಪ್ರತಿಭಟನೆ

ದಾವಣಗೆರೆ, ಫೆ. 28- ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾಯ್ದೆಗಳನ್ನು ರದ್ದುಪಡಿಸಬೇಕು. ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕೆಂಬುದು ಸೇರಿದಂತೆ ಇತರೆ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಮೇಟಿ ಬಣ) ಕಾರ್ಯಕರ್ತರು ನಗರದಲ್ಲಿ ಇಂದು ಪ್ರತಿಭಟನೆ ನಡೆಸಿದರು

ಜಯದೇವ ವೃತ್ತದಿಂದ ಜಿಲ್ಲಾಡಳಿತ ಭವನದವರೆಗೆ ಬೈಕ್ ಮೂಲಕ ತೆರಳಿ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಇದೇ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಗುಮ್ಮನೂರು ಬಸವರಾಜ್ ಮಾತನಾಡಿ, ರೈತರ ಚಳವಳಿಯನ್ನು ಹತ್ತಿಕ್ಕುವ ಕೆಲಸ ಮಾಡ ಬಾರದು. ಯುವ ರೈತ ಯುಖಂಡ ಶುಭಕರನ್ ಸಿಂಗ್ ಹತ್ಯೆ ಮಾಡಿರುವುದನ್ನು ಖಂಡಿಸಿದರು.

ಮೃತ ರೈತ ಕುಟುಂಬಕ್ಕೆ ಸಾಂತ್ವನ ಹೇಳುವದಷ್ಟೇ ಅಲ್ಲದೇ ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು. ಬಗರ್ ಹುಕ್ಕುಂ ಸಾಗುವಳಿದಾರರಿಗೆ ಸಮಿತಿ ರಚನೆ ಮಾಡಬೇಕು ಮತ್ತು ಕೂಡಲೇ ಹಕ್ಕುಪತ್ರ ನೀಡಬೇಕು. ಎಲ್ಲಾ ತಾಲ್ಲೂಕುಗಳಲ್ಲೂ ಬಗರ್ ಹುಕ್ಕುಂ ಸಭೆಗಳನ್ನು ನಡೆಸಬೇಕೆಂದು ಆಗ್ರಹಿಸಿದರು.

ಕರ್ನಾಟಕ ರಾಜ್ಯ ಸರ್ಕಾರ ರೈತರ ಖಾತೆಗೆ ಬೆಳೆ ಹಾನಿ ಪರಿಹಾರ 35 ಸಾವಿರ ರೂ. ಘೋಷಣೆ ಮಾಡಬೇಕು. ಬೆಳೆ ವಿಮೆ ಬಿಡುಗಡೆ ಮಾಡಬೇಕು. ಬ್ಯಾಂಕ್ ಅಧಿಕಾರಿಗಳು ರೈತರ ಮೇಲೆ ದೌರ್ಜನ್ಯ ಎಸಗಿ, ಬಲವಂತವಾಗಿ ಸಾಲ ವಸೂಲು ಮಾಡಬಾರದು ಎಂದು ಹೇಳಿದರು.

ಗ್ರಾಮ ಪಂಚಾಯತಿಗೆ ಒಂದರಂತೆ ಗೋಶಾಲೆ ತೆರೆಯಬೇಕು. ನೀರು, ಮೇವು ಒದಗಿಸಬೇಕು. ರೈತರ ಪಂಪ್‌ಸೆಟ್‌ಗಳಿಗೆ ನಿರಂತರವಾಗಿ ಹಗಲು ಏಳು ತಾಸು ವಿದ್ಯುತ್ ಸರಬರಾಜು ಮಾಡಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಲಾಗುವುದು ಎಂದು ತಿಳಿಸಿದರು.

ಪ್ರತಿಭಟನೆಯಲ್ಲಿ ಸಂಘದ ಪದಾಧಿಕಾರಿಗ ಳಾದ ಕೆಂಚಮ್ಮನಹಳ್ಳಿ ಹನುಮಂತಪ್ಪ, ಕಿತ್ತೂರು ಹನುಮಂತಪ್ಪ, ಸುನೀಲ್, ಮಲ್ಲಿಕಾರ್ಜುನ್ , ಚಿಕ್ಕಬೂದಿಹಾಳ್ ಭಗತ್ ಸಿಂಹ, ದೊಣ್ಣೆಹಳ್ಳಿ ಲೋಕಣ್ಣ, ನೀರ್ಥಡಿ ತಿಪ್ಪೇಶ್, ಕೋಲ್ಕುಂಟೆ ಬಸವರಾಜ್, ಜಗದೀಶ್, ಶಿವಕುಮಾರ್ ಮತ್ತಿತರರು ಭಾಗವಹಿಸಿದ್ದರು.

error: Content is protected !!