ಬಿಜೆಪಿ ಆಡಳಿತಕ್ಕೆ ಬೇಸತ್ತು ಕಾಂಗ್ರೆಸ್‌ಗೆ ಮತ ನೀಡಿದರೇ ಹೊರತು `ಗ್ಯಾರಂಟಿ’ಗಳಿಗಾಗಿ ಅಲ್ಲ

ಬಿಜೆಪಿ ಆಡಳಿತಕ್ಕೆ ಬೇಸತ್ತು ಕಾಂಗ್ರೆಸ್‌ಗೆ ಮತ ನೀಡಿದರೇ ಹೊರತು `ಗ್ಯಾರಂಟಿ’ಗಳಿಗಾಗಿ ಅಲ್ಲ

ಎಸ್‌ಡಿಪಿಐ  ಜಿಲ್ಲಾ ಸಮಾವೇಶದಲ್ಲಿ ರಾಷ್ಟ್ರೀಯ ಕಾರ್ಯದರ್ಶಿ ರಿಯಾಜ್‌ ಫರಂಗಿಪೇಟೆ  

ದಾವಣಗೆರೆ, ಫೆ. 28-   ಬಿಜೆಪಿ ಆಡಳಿತಕ್ಕೆ ಬೇಸತ್ತು ಮತ್ತು ರಾಜ್ಯದ ಅಭಿವೃದ್ಧಿ, ಹಿತಾಸಕ್ತಿ ಮತ್ತು ಶಾಂತಿಯುತ ಜೀವನದ ನಿರೀಕ್ಷೆಯಲ್ಲಿ  ಹಿಂದುಳಿದವರು ಮತ್ತು ಅಲ್ಪಸಂಖ್ಯಾತರು ಕಾಂಗ್ರೆಸ್‌ಗೆ ಮತ ನೀಡಿದರ ಹೊರತು,   ಆ ಪಕ್ಷದ  ಗ್ಯಾರಂಟಿಗಳಿಗೆ ಮರಳಾಗಿ ಅಲ್ಲ   ಎಂದು ಎಸ್‌ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ರಿಯಾಜ್‌ ಫರಂಗಿಪೇಟೆ ಅಭಿಪ್ರಾಯಿಸಿದರು.

ನಗರದ ಎಸ್. ಎಸ್. ಶಾದಿ ಮಹಲ್‌ನಲ್ಲಿ, ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ   ಜಿಲ್ಲಾ ಸಮಿತಿ ವತಿಯಿಂದ  ಹಮ್ಮಿಕೊಳ್ಳಲಾಗಿದ್ದ ಸಮಾವೇಶದಲ್ಲಿ ಅವರು ಮಾತನಾಡಿದರು.

ಕಳೆದ ಚುನಾವಣೆಯಲ್ಲಿ ಜಾತ್ಯತೀತ ಪಕ್ಷ ಎನಿಸಿಕೊಂಡ ಕಾಂಗ್ರೆಸ್‌ಗೆ ದಲಿತರು, ಹಿಂದುಳಿದವರು ಮತ್ತು ಹೆಚ್ಚಾಗಿ 90ರಷ್ಟು ಮುಸ್ಲಿಂ ಸಮುದಾಯ ಮತ ನೀಡುವ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತರಲು ಶ್ರಮಿಸಿದರು. ಏಕೆಂದರೆ ಕಳೆದ  ಬಿಜೆಪಿ ಸರ್ಕಾರ   ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಉದ್ದೇಶದಿಂದ  ರಾಜ್ಯದಲ್ಲಿ ಕೋಮು ಸಂಘರ್ಷವನ್ನು ಉಂಟು ಮಾಡಿತ್ತು. ಇದರಿಂದ ಬೇಸತ್ತ ಜನರು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದರು.  ಆದರೆ, ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರದ ಕಳೆದ 10 ತಿಂಗಳ ಅವಧಿ  ನೋಡಿದರೆ ಬಿಜೆಪಿಯನ್ನೇ ಮೀರಿಸಿದಂತಿದೆ  ಎಂದು ಅವರು ದೂರಿದರು. 

ಕಳೆದ ಚುನಾವಣೆಯಲ್ಲಿ ಇಬ್ಬರು ಎಸ್‍ಡಿಪಿಐನ ಶಾಸಕರನ್ನು ವಿಧಾನಸೌಧಕ್ಕೆ ಗೆಲ್ಲಿಸಿ ಕಳಿಸಿದ್ದರೆ ಎಲ್ಲಾ ಸಂಘರ್ಷಗಳಿಗೆ ತಡೆ ನೀಡಬಹುದಿತ್ತು. ಆದ್ದರಿಂದ ಮುಂದಿನ ದಿನಗಳಲ್ಲಿ   ನಕಲಿ ಜಾತ್ಯತೀತ ಮುಖವಾಡ ಧರಿಸಿದಂತವರನ್ನು  ತಿರಸ್ಕರಿಸಿ ನೈಜ, ಪರ್ಯಾಯವಾದ ಎಸ್‌ಡಿಪಿಐ ಪಕ್ಷವನ್ನು  ಬೆಂಬಲಿಸಲು ಅವರು ಕರೆ ನೀಡಿದರು. 

 ಎಸ್‌ಡಿಪಿಐ  ಜಿಲ್ಲಾಧ್ಯಕ್ಷ ಯಾಹಿಯಾ ಪ್ರಾಸ್ತಾವಿಕವಾಗಿ  ಮಾತನಾಡಿ,    ಈ ಪಕ್ಷವು ತಾಯಿ ಮಕ್ಕಳ ಮತ್ತು ಯಾವುದೇ ಕುಟುಂಬಕ್ಕೆ ಸೀಮಿತವಾದ ಪಕ್ಷವಲ್ಲ, ಈ ಪಕ್ಷವು ಕಾರ್ಯಕರ್ತರ ಪಕ್ಷ, ಇಲ್ಲಿ ಸಾಮಾನ್ಯ ಕಾರ್ಯಕರ್ತನೂ ಜಿಲ್ಲಾಧ್ಯಕ್ಷನಾಗಬಹುದು ಎಂಬುದಕ್ಕೆ ನಾನೇ ಸಾಕ್ಷಿ  ಮತ್ತು ಕೊರೊನಾ ಸಂದರ್ಭದಲ್ಲಿ ನಾವು ಯಾವುದೇ ಜಾತಿ ಮತ ನೋಡದೆ ಅವರವರ ಧಾರ್ಮಿಕ ವಿಧಿ ವಿಧಾನಗಳಂತೆ,  ಜೀವದ ಹಂಗು ತೆೊರೆದು ಕಾರ್ಯನಿರ್ವಹಿಸಿದ್ದೇವೆ. ಅದೇ ರೀತಿ ರಾಮಕೃಷ್ಣ ಹೆಗಡೆ ನಗರ ನಿವಾಸಿಗಳಿಗೆ ಅನ್ಯಾಯ ಆದಾಗಲೂ ಅವರ ಜೊತೆ ನಿಂತಿದ್ದು ಎಸ್‌ಡಿಪಿಐ   ಎಂದರು. 

ಜಿಲ್ಲಾ ಕಾರ್ಯದರ್ಶಿ ಮೊಹಮ್ಮದ್  ಅಜರುದ್ದೀನ್ ಬಾತಿ  ಸ್ವಾಗತಿಸಿದರು.  ಪಕ್ಷದ ಕಾರ್ಯ ಚಟುವಟಿಕೆಗಳ ಬಗ್ಗೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮೋಹಸಿನ್   ವಿವರಿಸಿದರು ಮತ್ತು ಜಿಲ್ಲಾ ಕೋಶಾಧಿಕಾರಿ  ಎ.ಆರ್. ತಾಹೀರ್ ವಂದಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಸಂಘಟನಾ ಪ್ರಧಾನ ಕಾರ್ಯದರ್ಶಿ ಫಯಾಜ್ ಅಹಮದ್, ಜಿಲ್ಲಾ ಉಪಾಧ್ಯಕ್ಷ ರಜ್ವಿ ರಿಯಾಜ್ ಅಹಮದ್, ಜಿಲ್ಲಾ ಸಮಿತಿ ಸದಸ್ಯ  ಫರೀದ್ ಖಾನ್, ಮಾಜಿ ಜಿಲ್ಲಾಧ್ಯಕ್ಷ   ಇಸ್ಮಾಯಿಲ್ ಜಬಿವುಲ್ಲಾ ಮತ್ತು ಹರಿಹರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ  ಸಮಿವುಲ್ಲಾ ಮುಲ್ಲಾ  ಮತ್ತಿತರರು ಉಪಸ್ಥಿತರಿದ್ದರು.

error: Content is protected !!