ತಾಂಡಾಗಳಲ್ಲಿ ಅನಧಿಕೃತ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಲು ಒತ್ತಾಯ

ದಾವಣಗೆರೆ, ಫೆ. 27- ರಾಜ್ಯದ ತಾಂಡಾಗಳಲ್ಲಿ ಅನಧಿಕೃತ ಮದ್ಯ ಮಾರಾಟಕ್ಕೆ ಕಡಿವಾಣ ಹಾಕುವಂತೆ ಜಿಲ್ಲಾ ಬಂಜಾರ ಸೇವಾ ಸಂಘದ ಅಧ್ಯಕ್ಷ ನಂಜಾನಾಯ್ಕ ಎಸ್.ಕಬ್ಬಳ ಒತ್ತಾಯಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದ ತಾಂಡಾಗಳಲ್ಲಿ ವಾಸ ಮಾಡುತ್ತಿರುವ ಲಂಬಾಣಿ ಜನಾಂಗದ ಆರೋಗ್ಯ ಮತ್ತು ತಾಂಡಾಗಳ ಅಭಿವೃದ್ಧಿಗೆ ಮಾರಕವಾಗುತ್ತಿರುವ ಅನಧಿೃತ ಮತ್ತು ಕಾನೂನು ಬಾಹಿರ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಯಂತ್ರಿಸಲು ಸರ್ಕಾರ ಬಿಗಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ರಾಜ್ಯದಲ್ಲಿ ಸುಮಾರು 3600 ಕ್ಕೂ ಅಧಿಕ ತಾಂಡಗಳಿದ್ದು, 40 ಲಕ್ಷ ಜನಸಂಖ್ಯೆಯನ್ನು ಹೊಂದಿದೆ. ಪ್ರತಿ ತಾಂಡಗಳಲ್ಲಿ ಕಾನೂನು ಬಾಹಿರವಾಗಿ ಮದ್ಯ ಮಾರಾಟ ಅವ್ಯಾಹತವಾಗಿ ನಡೆಯುತ್ತಿರುವುದು ಶೋಚನೀಯ ಸಂಗತಿಯಾಗಿದೆ ಎಂದರು.

ಮದ್ಯ ಸುಲಭವಾಗಿ, ಕೈಗೆಟಕುವಂತೆ ತಮ್ಮ ವಾಸ ಸ್ಥಾನದಲ್ಲಿಯೇ ಸಿಗುವಂತೆ ಮಾಡಲಾಗಿದೆ. ಚಿಕ್ಕಮಕ್ಕಳು, ಮಹಿಳೆಯರು, ಯುವಕರು, ವಿದ್ಯಾವಂತರು, ಕೂಲಿ ಕಾರ್ಮಿಕರು, ರೈತರು ಸೇರಿದಂತೆ ಎಲ್ಲಾ ವರ್ಗದವರು ತಾವು ದುಡಿದ ಹಣವನ್ನು ತಮ್ಮ ಅಭಿವೃದ್ಧಿಗೆ, ಮಕ್ಕಳ ವಿದ್ಯಾಭ್ಯಾಸಕ್ಕೆ, ಕುಟುಂಬ ನಿರ್ವಹಣೆಗೆ ವ್ಯಯಿಸದೇ, ಬಹುಪಾಲು ಜನರು ಬೆಳಿಗ್ಗೆಯಿಂದ ರಾತ್ರಿಯವರೆಗೆ ಮದ್ಯ ಖರೀದಿಸಿ, ಸೇವನೆ ಮಾಡುತ್ತಿದ್ದಾರೆ. ಇದರಿಂದ ಲಂಬಾಣಿಗರ ಶ್ರಮದ ಹಣ ಪರೋಕ್ಷವಾಗಿ ಸರ್ಕಾರದ ಬೊಕ್ಕಸಕ್ಕೆ ಸೇರುತ್ತಿದೆ ಎಂದು ಹೇಳಿದರು.

ಮತ್ತೊಂದು ಕಡೆ ವಿದ್ಯಾವಂತ ಯುವಕರು ಮದ್ಯ ವ್ಯಸನಿಗಳಾಗಿ, ನಿರುದ್ಯೋಗಿಗಳಾಗಿ, ಸಮಾಜಕ್ಕೆ ಕಂಟಕಪ್ರಾಯರಾಗಿ ಬೆಳೆಯುತ್ತಿದ್ದಾರೆ. ಯುವಕರು, ಮಧ್ಯ ವಯಸ್ಕರರೇ ಮದ್ಯ ಸೇವಿಸಿ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ಅತಿಯಾದ ಕುಡಿತದ ಚಟಕ್ಕೆ ಬಲಿಯಾಗಿ ಅನೇಕರು ಸಾವನ್ನಪ್ಪಿದ ಉದಾಹರಣೆಗಳು ಸಹ ಇವೆ ಎಂದರು. ರಾಜ್ಯ ಸರ್ಕಾರ ಕೂಡಲೇ ಇತ್ತ ಗಮನಹರಿಸಿ, ರಾಜ್ಯದಲ್ಲಿರುವ ಅನಧಿಕೃತ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಿ, ಯುವ ಜನಾಂಗವನ್ನು ಸರಿದಾರಿಗೆ ತರುವ ಪ್ರಯತ್ನ ಮಾಡಬೇಕೆಂದರು.

ರಾಜ್ಯದ ಎಲ್ಲಾ ಲಂಬಾಣಿ ಪ್ರಗತಿಪರ ಸಂಘಟನೆಗಳ ಸಹಯೋಗದಲ್ಲಿ ಬೃತಹತ್ `ತಾಂಡಾ ಬಚಾವೋ’ ಚಳವಳಿ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಸರ್ಕಾರ ಅಬಕಾರಿ ನೀತಿಗಳಲ್ಲಿ ಕೆಲ ಬಿಗಿಯಾದ ವ್ಯವಸ್ಥೆಯನ್ನು ಜಾರಿಗೊಳಿಸಿ, ತಾಂಡಾಗಳನ್ನು ರಕ್ಷಿಸಬೇಕಾಗಿದೆ. ಇಲ್ಲದಿದ್ದರೆ ಇಡೀ ಬಂಜಾರ ಸಮುದಾಯ ಸಾಮಾಜಿಕ ಚಳವಳಿ ರೂಪದಲ್ಲಿ ಈ ಪಿಡುಗನ್ನು ಹೋಗಲಾಡಿಸಲು ಮುಂದಾಗಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ವಕೀಲರಾದ ಕೆ.ಆರ್. ಮಲ್ಲೇಶನಾಯ್ಕ, ಕುಬೇರನಾಯ್ಕ ಮತ್ತಿತರರು ಉಪಸ್ಥಿತರಿದ್ದರು.

error: Content is protected !!