ಜೀತ ಪದ್ಧತಿ ಬುಡ ಸಮೇತ ಕಿತ್ತೊಗೆಯಬೇಕು

ಜೀತ ಪದ್ಧತಿ ಬುಡ ಸಮೇತ ಕಿತ್ತೊಗೆಯಬೇಕು

ಜೀತ ಪದ್ಧತಿ ನಿರ್ಮೂಲನಾ ಜಾಥಾದಲ್ಲಿ ರಾಜೇಶ್ವರಿ ಎನ್.ಹೆಗಡೆ

ದಾವಣಗೆರೆ, ಫೆ.25- ಜೀತ ಪದ್ಧತಿ ನಿರ್ಮೂಲನೆ ಮಾಡಲು ಕಾಯ್ದೆ ರೂಪಿಸಲಾಗಿದ್ದರೂ ಅಲ್ಲಲ್ಲಿ ಈ ಪದ್ದತಿ ಇನ್ನೂ ಜೀವಂತವಾಗಿದೆ ಎಂದು ವರದಿಯಾಗುತ್ತಿದೆ. ಇದನ್ನು ಬುಡ ಸಮೇತ ಕಿತ್ತೊಗೆಯಲು ಎಲ್ಲರೂ ಸಹಕಾರ ನೀಡಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಾದ ರಾಜೇಶ್ವರಿ ಎನ್. ಹೆಗಡೆ ಹೇಳಿದರು.

 ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ವತಿಯಿಂದ ನಗರದ ಅಂಬೇಡ್ಕರ್ ವೃತ್ತದಲ್ಲಿ ಆಯೋಜಿಸಲಾಗಿದ್ದ ಜೀತ ಪದ್ಧತಿ ನಿರ್ಮೂಲನಾ ದಿನಾಚರಣೆಯ ಜಾಥಾ ಕಾರ್ಯಕ್ರಮದಲ್ಲಿ ಅವರು  ಮಾತನಾಡಿದರು.  ಜೀತ ಪದ್ಧತಿ ರದ್ಧತಿ ಕಾಯ್ದೆಯನ್ನು 1976 ರಲ್ಲಿ ದೇಶದಾದ್ಯಂತ ಜಾರಿ ಮಾಡಲಾಯಿತು. ಜೀತ ಪದ್ಧತಿ ಈಗಲೂ ಎಲ್ಲೆಲ್ಲಿ ನಡೀತಿದೆ ಎಂದು ಗುರುತಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿ ಅದನ್ನು ನಿರ್ಮೂಲನೆ ಮಾಡಬೇಕು ಎಂದರು.

ನಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಮಾತಾನಾಡಿ, ಯಾವುದೇ ಒಬ್ಬ ವ್ಯಕ್ತಿಗೆ ಅವನ ಇಚ್ಛೆ ವಿರುದ್ಧವಾಗಿ ಅವನನ್ನು ಕೂಡಿಟ್ಟು ಕೆಲಸವನ್ನು ಮಾಡಿಸುತ್ತಾರೆ, ಅದು ನಮ್ಮ ಗಮನಕ್ಕೆ ಬಂದರೆ, ನಾವು ಕಾನೂನು ರೀತಿ ಕ್ರಮವನ್ನು ತೆಗೆದುಕೊಳ್ಳುತ್ತೇವೆ. ಪ್ರತಿಯೊಬ್ಬರಿಗೂ ಕಾನೂನಿನ ಅರಿವು ಇರಬೇಕು, ಜೀತ ಪದ್ಧತಿಯಂತಹ ಘಟನೆಗಳು ಎಲ್ಲಿಯಾದರೂ ನಡೆದರೆ ಅದನ್ನು ಗುರುತಿಸಿ ಸಂಬಂಧ ಪಟ್ಟವರ ಗಮನಕ್ಕೆ ತರಬೇಕು. ಆಗ ಮಾತ್ರ ಕಾನೂನು ರೀತಿ ಕ್ರಮವನ್ನು ತೆಗೆದುಕೊಳ್ಳಲು ಸಾಧ್ಯ ಎಂದರು. 

ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ.ಮ.ಕರೆಣ್ಣವರು ಸಂವಿಧಾನದ ಪ್ರಸ್ತಾವನೆ ಓದುವ ಮೂಲಕ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ್ ಅಶ್ವತ್, ಜಿ. ಪಂ. ಸಿಪಿಓ ಮಲ್ಲಾನಾಯ್ಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪ ನಿರ್ದೇಶಕಿ ವಾಸಂತಿ ಉಪ್ಪಾರ್, ಡಿಡಿಪಿಐ ಜಿ. ಕೊಟ್ರೇಶ್, ವಕೀಲರ ಸಂಘದ ಅಧ್ಯಕ್ಷ ಎಲ್. ಹೆಚ್ ಅರುಣಕುಮಾರ್ ಉಪಸ್ಥಿತರಿದ್ದರು.

error: Content is protected !!