18 ಮೇವು ಕತ್ತರಿಸುವ ಯಂತ್ರಗಳ ವಿತರಣೆ

18 ಮೇವು ಕತ್ತರಿಸುವ ಯಂತ್ರಗಳ ವಿತರಣೆ

ಪ್ರಸ್ತುತ ದಿನಗಳಲ್ಲಿ ದನ – ಕರು, ಎಮ್ಮೆ ಸಾಕಾಣಿಕೆ ಪ್ರವೃತ್ತಿ ರೈತರಲ್ಲಿ ಕಡಿಮೆಯಾಗುತ್ತಿದೆ. ಪ್ರತಿಯೊಬ್ಬ ರೈತರೂ ಕೂಡ ಜಾನುವಾರುಗಳು, ಕುರಿ, ಮೇಕೆ, ಸಾಕಾಣಿಕೆಗೆ ಮುಂದಾಗಬೇಕು. ರೈತರು ಕೇವಲ ಕೃಷಿಯನ್ನೇ ಅವಲಂಬಿಸಿದರೆ ಸಾಲದು, ಹೈನುಗಾರಿಕೆ ವಿಶೇಷವಾಗಿ ರೈತ ಮಹಿಳೆಯರಿಗೆ ತುಂಬಾ ಸಹಕಾರಿ.

– ಡಿ.ಜಿ. ಶಾಂತನಗೌಡ, ಶಾಸಕರು, ಹೊನ್ನಾಳಿ

ಹೊನ್ನಾಳಿ, ಫೆ. 25- ಪಕ್ಷ – ಜಾತಿ-ಭೇದವಿಲ್ಲದೇ ಅರ್ಹ ಫಲಾನುಭವಿಗಳಿಗೆ ಇಲಾಖೆಯ ಸೌಲಭ್ಯಗಳನ್ನು ತಲುಪಿಸುವ ಕೆಲಸವಾಗಬೇಕು ಎಂದು ಶಾಸಕ ಡಿ.ಜಿ. ಶಾಂತನಗೌಡ ಅಧಿಕಾರಿಗಳಿಗೆ ನಿರ್ದೇಶಿಸಿದರು.

ಭಾನುವಾರ ಪಟ್ಟಣದ ಪಶುಪಾಲನಾ ಹಾಗೂ ಪಶು ವೈದ್ಯಕೀಯ ಇಲಾಖೆ ವತಿಯಿಂದ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡ ರೈತರಿಗೆ ಮೇವು ಕತ್ತರಿಸುವ ಯಂತ್ರಗಳನ್ನು ವಿತರಿಸಿ ಅವರು ಮಾತನಾಡಿದರು.

ಹಿಂದೆಂದೂ ಕಾಣದ ಭೀಕರ ಬರಗಾಲ ತಲೆದೋರಿದ್ದು, ಯಾವುದೇ ಕಾರಣಕ್ಕೂ ರೈತರನ್ನು ವೃಥಾ ಅಲೆದಾಡಿಸದೇ ಅಧಿಕಾರಿಗಳು ರೈತ ಸಮುದಾಯಕ್ಕೆ ಸ್ಪಂದಿಸಬೇಕು. ರೈತರಿಗೆ ಕಾಲ-ಕಾಲಕ್ಕೆ ಸರ್ಕಾರದಿಂದ ಬರುವ ಸೌಲಭ್ಯಗಳ ಕುರಿತು ಪ್ರಾಮಾಣಿಕವಾಗಿ ಮಾಹಿತಿ ಮುಟ್ಟಿಸಬೇಕು ಎಂದರು.

ಹೈನುಗಾರಿಕೆ ರೈತರಿಗೆ ಒಂದು ವರದಾನವಾಗಿದ್ದು, ಕೃಷಿ ಜೊತೆಗೆ ಹೈನುಗಾರಿಕೆಯನ್ನು ಕೂಡ ರೈತರು ಅಳವಡಿಸಿಕೊಳ್ಳಬೇಕು.  ಹೈನುಗಾರಿಕೆ ರೈತರ ಆರ್ಥಿಕ ಪರಿಸ್ಥಿತಿ ಸುಧಾರಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಸಲಹೆ ನೀಡಿದರು.

ಮೇವು ಕತ್ತರಿಸುವ ಯಂತ್ರ ಒಂದಕ್ಕೆ 33 ಸಾವಿರ ಇದ್ದು, ಪಶು ವೈದ್ಯ ಇಲಾಖೆ ವತಿಯಿಂದ ಶೇ. 50 ರ ರಿಯಾಯಿತಿ ದರದಲ್ಲಿ ಪೂರೈಕೆ ಮಾಡಲಾಗುತ್ತಿದೆ. 

ಫಲಾನುಭವಿ ರೈತರು 16500 ರೂ. ಪಾವತಿ ಮಾಡಬೇಕಾಗುತ್ತದೆ. ಉಳಿದ ಅರ್ಧದಷ್ಟು ಹಣವನ್ನು ಸರ್ಕಾರವೇ ಭರಿಸುತ್ತದೆ ಎಂದು ಮಾಹಿತಿ ನೀಡಿದರು.

ಈ ವರ್ಷ ಒಟ್ಟು 18 ಫಲಾನುಭವಿಗಳಿಗೆ ಆರ್.ಕೆ.ಇ.ವೈ. ಯೋಜನೆಯಡಿ ಈ ಮೇವು ಕತ್ತರಿಸುವ ಯಂತ್ರಗಳು ಮಂಜೂರಾಗಿದ್ದು, ಇದೀಗ 8 ಜನರಿಗೆ ವಿತರಣೆ ಮಾಡಲಾಗಿದೆ. ಅಧಿಕಾರಿಗಳು ಏಕಕಾಲಕ್ಕೆ ವಾಹನ ನಿಗದಿ ಮಾಡಿ ಎಲ್ಲಾ ರೈತರಿಗೂ ಯಂತ್ರಗಳನ್ನು ಅವರ ಮನೆ ಬಾಗಿಲಿಗೆ ಮುಟ್ಟಿಸಿ ಸಾಗಾಣಿಕೆ ವೆಚ್ಚವೂ ಕಡಿಮೆಯಾಗುವಂತೆ ಕ್ರಮ ಜರುಗಿಸಬೇಕೆಂದು ಸೂಚಿಸಿದರು.

ಪಶುಪಾಲನಾ ಮತ್ತು ಪಶು ವೈದ್ಯ
ಇಲಾಖೆಯ ಅಧಿಕಾರಿ ಡಾ. ವಿಶ್ವನಟೇಶ್, ಪಶು ವೈದ್ಯರಾದ ಡಾ. ಚಂದ್ರಶೇಖರ್, ಕಿರಿಯ ಪಶು ವೈದ್ಯಕೀಯ ಪರೀಕ್ಷಕರಾದ ಡಾ.ಮೇಘನಾ ರಂಗನಾಥ್, ಜಾನುವಾರು ಅಭಿವೃದ್ಧಿ ಅಧಿಕಾರಿ ಹಾಲನಗೌಡ, ಪುರಸಭೆ ಸದಸ್ಯ ಮೈಲಪ್ಪ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಹಾಜರಿದ್ದರು. 

error: Content is protected !!