ರಾಣೇಬೆನ್ನೂರು, ಫೆ. 25 – ಸಿಎಂ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೊಡುತ್ತಿರುವುದು ಬಿಟ್ಟಿ ಅಲ್ಲಾ ಗಟ್ಟಿ ಗ್ಯಾರಂಟಿಗಳು. ಚುನಾವಣೆ ಪೂರ್ವ ಕೊಟ್ಟ ಮಾತಿನಂತೆ ನಮ್ಮ ಸರ್ಕಾರ ನಡೆಯುತ್ತಿದೆ. ಬಿಜೆಪಿ ತರಿಸಿದ ಬಡವರ ಕಣ್ಣೀರನ್ನು ಕಾಂಗ್ರೆಸ್ ಒರೆಸುತ್ತಿದೆ. ಅದು ನಮ್ಮ ಪಕ್ಷದ ಬದ್ದತೆ ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.
ಅವರು ಕುಪ್ಪೇಲೂರಿನಲ್ಲಿ ನಡೆದ ಹೋ ಬಳಿ ಮಟ್ಟದ ಗ್ಯಾರಂಟಿಗಳ ಫಲಾನುಭವಿಗಳ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ದಾವಣಗೆರೆ ಜಿಲ್ಲೆಯ ಅಡಿಕೆ ಬೆಳೆಗಾರರಿಗೆ ದೊರೆಯುತ್ತಿರುವ ಬೆಳೆ ವಿಮೆ, ಸಸಿ ನೆಡಲು,
ಗೊಬ್ಬರ ಸಹಾಯಧನವನ್ನು ರಾಣೇಬೆನ್ನೂರು ಬೆಳೆಗಾರರಿಗೆ ಕೊಡಲು ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರು ಒಪ್ಪಿ ಆದೇಶ ಮಾಡಿದ್ದಾರೆ. ಅಮೃತ ಯೋಜನೆಯಲ್ಲಿ ರಾಣೇಬೆನ್ನೂರು ನಗರಕ್ಕೆ 35 ಕೋಟಿ, ಜಿಲ್ಲೆಯ ಮುಖ್ಯ ರಸ್ತೆಗಳಿಗೆ, ಮೊರಾರ್ಜಿ ಶಾಲೆಗಳಿಗೆ, ಆರ್ಟಿಓ ಕಛೇರಿ ಕಟ್ಟಡ, ಕೃಷ್ಣಮೃಗ ಅಭಯಾರಣ್ಯದ ಅಭಿವೃದ್ಧಿಗೆ ಸರ್ಕಾರದ ಅನುದಾನ ಬಂದಿದೆ ಎಂದು ಕೋಳಿವಾಡ ಹೇಳಿದರು.
ಕಾಂಗ್ರೆಸ್ ಮುಖಂಡರಾದ ಮಂಜನಗೌಡ ಪಾಟೀಲ, ರವೀಂದ್ರಗೌಡ ಪಾಟೀಲ, ತಾ.ಪಂ. ಮಾಜಿ ಸದಸ್ಯೆ ಭಾರತಿ ಸುರಹೊನ್ನಿ, ತಹಶೀಲ್ದಾರ್ ಗುರುಬಸನಗೌಡ, ಶಿಕ್ಷಣಾಧಿಕಾರಿ
ಎಮ್.ಎಚ್. ಪಾಟೀಲ, ಸಿಡಿಪಿಓ ಪಾರ್ವತಿ ಹುಂಡೆಕಾರ, ಕೆಎಸ್ಆರ್ಟಿಸಿ ವ್ಯವಸ್ಥಾಪಕ ಪ್ರಕಾಶ ಸಂಗರ್ಸಿ, ಕೆಇಬಿಯ ಮೋಹನ ಐರಣಿ, ಅನ್ನಭಾಗ್ಯದ ಶಿವಪ್ಪ ವನಳ್ಳಿ ಗ್ಯಾರಂಟಿಗಳ ಮಾಹಿತಿ ವಿವರಿಸಿದರು. ಈಓ ಸುಮಲತಾ ಸ್ವಾಗತಿಸಿದರು. ಪಿಡಿಓ ಟಿ.ಬಿ. ಮೂಗನವರ ವಂದಿಸಿದರು.
ಸಿದ್ರಾಮಣ್ಣ ಟಿಕೆಟ್ : ಹೆಣ್ಣು ಮಕ್ಕಳು ಬಸ್ ಹತ್ತಲು ಬಂದಾಗ ಕೆಲ ಕಂಡಕ್ಟರ್ಗಳು ಅವರಿಗೆ ಗೌರವ ಕೊಡದೆ ಅಸಭ್ಯ ರೀತಿಯಿಂದ ವರ್ತಿಸುತ್ತಿರುವುದು ಕೇಳಿಬರುತ್ತಿದೆ. ಸ್ತ್ರೀ ಶಕ್ತಿ ಯೋಜನೆಯಿಂದ ಸಾರಿಗೆ ಸಂಸ್ಥೆಯವರ ವರದಿ ಪ್ರಕಾರ ಆದಾಯ ಬಹಳಷ್ಟು ಹೆಚ್ಚಿದೆ. ನಮ್ಮ ಟಿಕೆಟ್ ಸಿದ್ದರಾಮಣ್ಣ ತೆಗೆಸಿದ್ದಾರೆ ಅಂತಾ ಅಸಭ್ಯೆ ವರ್ತನೆಯ ಕಂಡಕ್ಟರ್ಗಳಿಗೆ ಹೇಳಿರಿ ಎಂದು ಶಾಸಕರು ಮಹಿಳೆಯರಿಗೆ ತಿಳಿಸಿದರು.