ಬೆಳ್ಳೂಡಿ ಶ್ರೀ ಉಡಸಲಾಂಬಿಕಾ ದೇವಿ ಪ್ರಾಣ ಪ್ರತಿಷ್ಟಾಪನೆ ಕಾರ್ಯಕ್ರಮದಲ್ಲಿ ಶ್ರೀ ನಿರಂಜನಾನಂದಪುರಿ ಶ್ರೀಗಳು
ಹರಿಹರ, ಫೆ. 23- ದೇವರು ಮತ್ತು ದೈವದ ಹೆಸರಿನಲ್ಲಿ ಕುರಿ ಮತ್ತು ಕೋಳಿ ಬಲಿ ಕೊಡುವ ಪದ್ದತಿಯಿಂದ ಮುಕ್ತರಾದಾಗ ಮಾತ್ರ ಸುಭಿಕ್ಷೆ ಮತ್ತು ಸುಂದರ ಸಮಾಜ ಕಟ್ಟುವುದರ ಜೊತೆಗೆ ಆರ್ಥಿಕವಾಗಿ ಸದೃಢರಾಗಲು ಸಾಧ್ಯವಿದೆ ಎಂದು ಕಾಗಿನೆಲೆ ಕನಕ ಗುರುಪೀಠದ ಜಗದ್ಗುರು ಶ್ರೀ ನಿರಂಜನಾನಂದಪುರಿ ಮಹಾಸ್ವಾಮೀಜಿ ಅಭಿಪ್ರಾಯಪಟ್ಟರು.
ಬೆಳ್ಳೂಡಿ ಗ್ರಾಮದಲ್ಲಿ ಶ್ರೀ ಉಡಸಲಾಂಬಿಕಾ ದೇವಿ ದೇವಸ್ಥಾನದಲ್ಲಿ ಇಂದು ಏರ್ಪಾಡಾಗಿದ್ದ ಪ್ರಾಣ ಪ್ರತಿಷ್ಟಾಪನೆ ಹಾಗೂ ಕಳಸಾರೋಹಣ ಸಮಾರಂಭವನ್ನು ಉದ್ಘಾಟಿಸಿ ಶ್ರೀಗಳು ಮಾತನಾಡಿದರು.
ಸಾಲ ಮಾಡಿ ಕುರಿ, ಕೋಳಿ ಬಲಿ ಕೊಟ್ಟು ಹಬ್ಬದ ಆಚರಣೆ ಮಾಡಿ ಎಂದು ಯಾವ ದೇವರು ಕೂಡ ಅಭಿಲಾಷೆ ಹೊಂದಿರುವುದಿಲ್ಲ. ಅಂತಹ ದೇವರು ಕೂಡ ನಮ್ಮ ದೇವರಲ್ಲ. ಜನರು ಹಬ್ಬವನ್ನು ಮಾಡಬೇಡಿ ಎಂದು ನಾವು ಹೇಳುತ್ತಿಲ್ಲ, ಮಾಂಸ ತಿನ್ನಬೇಡಿ ಎಂದು ಹೇಳುತ್ತಿಲ್ಲ. ಮಾಂಸ ಸೇವನೆ ಒಂದು ಆಹಾರ ಪದ್ದತಿಯಾಗಿದೆ. ಆದರೆ ಮೌಢ್ಯಗಳಿಂದ ಕೂಡಿದ ಹಬ್ಬದ ಆಚರಣೆಯಿಂದ, ಸಾಲವನ್ನು ಮಾಡಿ ಅಧಃಪತನಕ್ಕೆ ಹೋಗದೆ, ಹೋಳಿಗೆ, ಕಡುಬು ತಿಂದುಕೊಂಡು ಹಬ್ಬದ ಆಚರಣೆ ಮಾಡಿದಾಗ ಸಾಲದ ಹೊರೆಯಿಲ್ಲದ ಜೀವನವನ್ನು ನಡೆಸಬಹುದು ಎಂದರು.
ಪಕ್ಕದ ಗೋವಿನಾಳು ಮತ್ತು ಶಿಕಾರಿಪುರದ ಮಟ್ಟಿಕೋಟೆ ಗ್ರಾಮದಲ್ಲಿ ಬಲಿ ಕೊಡುವ ಹಬ್ಬಗಳನ್ನು ನಿಷೇಧ ಮಾಡಿ, ಅಲ್ಲಿನ ಜನರು ಸುಭಿಕ್ಷವಾಗಿ ಇದ್ದಾರೆ. ಹಾಗೆ ಇಲ್ಲಿನ ಗ್ರಾಮಸ್ಥರು ಕೂಡ ಚಿಂತನೆ ಮಾಡಬೇಕು.
ಶೋಷಿತ ಸಮುದಾಯದ ಜನರು ಮೌಢ್ಯತೆಯಿಂದ ಹೊರ ಬಂದು ಕುರಿ, ಕೋಳಿ ಬಲಿ ಕೊಡುವ ಪದ್ದತಿಗೆ ತಿಲಾಂಜಲಿ ಹಾಡುವಂತೆ ಆಗಬೇಕು. ಈ ಬಗ್ಗೆ ಹೆಚ್ಚು ಚಿಂತೆ ಮಾಡಬೇಕು. ಆಗ ಗ್ರಾಮದಲ್ಲಿ ಬಡ ಜನರು ಸುಂದರ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಿದೆ ಎಂದು ಹೇಳಿದರು.
ಶ್ರೀ ಬಸವಪ್ರಭು ಮಡಿವಾಳ ಮಾಚಿದೇವ ಸ್ವಾಮೀಜಿ ಮಾತನಾಡಿ, ದೇವಸ್ಥಾನ ಮತ್ತು ದೇವರು ಎಂಬುದು ಧರ್ಮದ ಜಾಗೃತಿಯ ಸಂಕೇತವಾಗಿದೆ. ದೇವಸ್ಥಾನ ನಿರ್ಮಾಣ ಮಾಡುವುದರಿಂದ ದೈವಿಕ ಶಕ್ತಿ ಮತ್ತು ಮಾನಸಿಕ ಶಕ್ತಿ ಉಂಟಾಗುತ್ತದೆ. ದೈವಿಕ ಶಕ್ತಿ ಹುಟ್ಟುತ್ತಲೇ ಬರುತ್ತದೆ ಆದರೆ ಮಾನಸಿಕ ಶಕ್ತಿ ಅನುಭವದ ಅಡಿಯಲ್ಲಿ ಬರುತ್ತದೆ. ಮಾಟ-ಮಂತ್ರ ಮತ್ತು ಮೌಢ್ಯಗಳನ್ನು ನಂಬುವುದರ ಬದಲಿಗೆ ಸಾಕ್ಷರತೆಯ ಕಡೆಗೆ ಎಲ್ಲರೂ ಮುಂದಾಗಬೇಕಿದೆ ಎಂದು ಹೇಳಿದರು.
ವಿಶ್ವಬಂಧು ಕೋ – ಆಪರೇಟಿವ್ ಸೊಸೈಟಿ ಅಧ್ಯಕ್ಷ ಬೆಳ್ಳೂಡಿ ಬಿ. ರಾಮಚಂದ್ರಪ್ಪ ಮಾತನಾಡಿ, ದೇವಸ್ಥಾನ ನಿರ್ಮಾಣ ಮಾಡಿದರೆ ಸಾಲದು, ಭಕ್ತರು ಕೂಡಾ ಸುಸಂಸ್ಕೃತರಾಗಬೇಕು ಎಂದು ಹೇಳಿದರು.
ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಡಿ. ಕುಮಾರ್ ಮಾತನಾಡಿ, ಗ್ರಾಮದ ಜನರು ದೇವಸ್ಥಾನ ನಿರ್ಮಾಣದ ಬದಲಿಗೆ ಶಾಲೆಗಳನ್ನು ತೆರೆಯು ವುದಕ್ಕೆ ಮುಂದಾಗಬೇಕು ಎಂದು ಹೇಳಿದರು.
ಒಂದು ಗ್ರಾಮವು ಚೆನ್ನಾಗಿ ಇರಬೇಕಾದರೆ ದೇವಸ್ಥಾನ ಮತ್ತು ಶಾಲೆ ಎರಡೂ ಇರಬೇಕು. ಆಗ ಗ್ರಾಮದಲ್ಲಿ ಎಲ್ಲವೂ ಸುಸೂತ್ರವಾಗಿ ಸಾಗುತ್ತದೆ ಎಂದು ಬಿಜೆಪಿ ಮುಖಂಡ ಚಂದ್ರಶೇಖರ್ ಪೂಜಾರ್ ಹೇಳಿದರು.
ಮಾಜಿ ಶಾಸಕ ಎಸ್. ರಾಮಪ್ಪ ಮಾತನಾಡಿ ದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಜಿ.ಎಂ. ಅನಿತ್, ಜಿಲ್ಲಾ ಬಿಜೆಪಿ ಸಂಚಾಲಕ ಹನಗವಾಡಿ ಎಸ್.ಎಂ. ವೀರೇಶ್, ಗ್ರಾಪಂ ಅಧ್ಯಕ್ಷ ಉಮೇಶ್, ಉಪಾಧ್ಯಕ್ಷೆ ನೇತ್ರಾವತಿ ಎಕ್ಕೇಗೊಂದಿ, ಧರ್ಮಸ್ಥಳ ಸಂಘದ ಗಣಪತಿ ಮಾಳಂಜೆ, ದೇವಸ್ಥಾನ ಸಮಿತಿಯ ಮರುಳಸಿದ್ದಯ್ಯ, ಹನುಮಂತ ಗೌಡ್ರು, ಜಿ.ಎಸ್.ಸುದೀಪ್ ಗೌಡ್ರು, ಬಿ.ವೈ. ಭೀಮಪ್ಪ, ಬಾತಿ ಮಹೇಶ್ವರಪ್ಪ, ವಿರೂಪಾಕ್ಷಪ್ಪ, ಕೂಲಂಬಿ ರಮೇಶ್, ಬಿ. ಸಿದ್ದೇಶ್, ತಳವಾರ ಹನುಮಂತಪ್ಪ, ಬೆಳಗೇರಿ ಸುರೇಶ್, ಮಡಿವಾಳ ಅಜ್ಜಪ್ಪ, ಎಸ್.ಜಿ. ಸಿದ್ದೇಶಪ್ಪ, ವೆಂಕಟೇಶಪ್ಪ, ಜಿ.ಎಸ್. ಜಗದೀಶ್, ಪೂಜಾರ್ ಶಂಕ್ರಪ್ಪ, ಹರೀಶ್ ಇತರರು ಉಪಸ್ಥಿತರಿದ್ದರು.