ನೇಕಾರರ ಬೇಡಿಕೆ ಈಡೇರಿಕೆಗಾಗಿ ಪ್ರತಿಭಟನೆ

ನೇಕಾರರ ಬೇಡಿಕೆ ಈಡೇರಿಕೆಗಾಗಿ ಪ್ರತಿಭಟನೆ

ನೇಕಾರ ಅಭಿವೃದ್ಧಿ ನಿಗಮ ಕಾರ್ಯಾರಂಭಕ್ಕೆ ಒತ್ತಾಯ, ಸರ್ಕಾರಕ್ಕೆ ಮನವಿ ಸಲ್ಲಿಕೆ

ದಾವಣಗೆರೆ, ಮಾ.23- ನೇಕಾರ ಅಭಿವೃದ್ಧಿ ನಿಗಮ ಶೀಘ್ರ ಕಾರ್ಯಾರಂಭ ಮಾಡಲು ಕ್ರಮವಹಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಜಿಲ್ಲಾ ನೇಕಾರರ ಸಮುದಾಯಗಳ ಒಕ್ಕೂಟದ ನೇತೃತ್ವದಲ್ಲಿ ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ಜಯದೇವ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ನಂತರ ಉಪವಿಭಾಗಾಧಿಕಾರಿ ಕಚೇರಿ ವರೆಗೆ ಮೆರವಣಿಗೆ ನಡೆಸಿ, ಉಪವಿಭಾಗಾಧಿಕಾರಿ ದುರ್ಗಶ್ರೀ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಈ ವೇಳೆ ಮಾತನಾಡಿದ ಒಕ್ಕೂಟದ ಗೌರವಾಧ್ಯಕ್ಷ ಡಿ. ಬಸವರಾಜ ಗುಬ್ಬಿ, ನೇಕಾರರ ಅಭಿವೃದ್ಧಿಗೆ ಸರ್ಕಾರ ಒಂದು ನೂರು ಕೋಟಿ ರೂ. ಮೀಸಲಿರಿಸಬೇಕು. ದಾವಣಗೆರೆಯಲ್ಲಿ  ಜವಳಿ ಪಾರ್ಕ್ ನಿರ್ಮಿಸಬೇಕು. ರಾಜ್ಯದಲ್ಲಿ 60ಲಕ್ಷ ಜನಸಂಖ್ಯೆ ಇರುವ ನೇಕಾರರಿಗೆ ರಾಜಕೀಯ ಪ್ರಾತಿನಿಧ್ಯ ಕಲ್ಪಿಸಬೇಕು. ಆತ್ಮಹತ್ಯೆ ಮಾಡಿಕೊಂಡ ನೇಕಾರರ ಕುಟುಂಬಗಳಿಗೆ ಶೀಘ್ರ ಪರಿಹಾರ ಧನ ನೀಡಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ನೇಕಾರ ಸಮುದಾಯ ಒಕ್ಕೂಟದ ಪ್ರಮುಖರಾದ ಶಿವಕುಮಾರ್ ಸುಹಾಪುರ್, ವೆಂಕಟೇಶ್ ಕೆ.ಎನ್., ಸೋಮಶೇಖರ್ ಯಡಳ್ಳಿ, ಕರಿಬಸಪ್ಪ ಐರಣಿ, ಹೆಚ್. ಪರಶುರಾಮ್ ನಂದಿಗಾವಿ ಇನ್ನಿತರರು ಪ್ರತಿಭಟನೆಯಲ್ಲಿದ್ದರು.

error: Content is protected !!