ಮಲೇಬೆನ್ನೂರು, ಫೆ.23- ಭದ್ರಾ ಅಚ್ಚು ಕಟ್ಟಿನ ಮಲೇಬೆನ್ನೂರಿನ ಕೆಳಭಾಗದಲ್ಲಿರುವ ಜಿಗಳಿ, ಯಲವಟ್ಟಿ, ಸಿರಿಗೆರೆ, ಕೆ.ಎನ್.ಹಳ್ಳಿ, ಕೊಕ್ಕನೂರು, ಹಳ್ಳಿಹಾಳ್, ಭಾನುವಳ್ಳಿ, ನಂದಿತಾವರೆಗಳಿಗೆ ಇದುವರೆಗೂ ಭದ್ರಾ ಕಾಲುವೆ ನೀರು ತಲುಪಿಲ್ಲ ಎಂದು ರೈತರು ಶುಕ್ರವಾರ ಆಕ್ರೋಶ ವ್ಯಕ್ತಪಡಿಸಿದರು.
ಮಲೇಬೆನ್ನೂರಿನಲ್ಲಿರುವ ನೀರಾವರಿ ಕಚೇರಿಗೆ ಆಗಮಿಸಿದ್ದ ನೂರಾರು ರೈತರು, ಕೆಳಭಾಗಕ್ಕೆ ನೀರು ಬರುತ್ತಿಲ್ಲ. ಮೇಲ್ಭಾಗದ ರೈತರು ತೋಟ-ಗದ್ದೆಗಳಿಗೆ ನೀರು ತುಂಬಿಸಿಕೊಳ್ಳುತ್ತಿದ್ದಾರೆ. ಇಂಜಿನಿಯರ್‌ಗಳು ಸರಿಯಾಗಿ ನೀರಿನ ನಿರ್ವಹಣೆ ಮಾಡುತ್ತಿಲ್ಲ. ಪಂಪ್‌ಸೆಟ್‌ಗಳ ತೆರವು ಕಾರ್ಯಾಚರಣೆಯನ್ನು ಕಾಟಚಾರಕ್ಕೆ ಮಾಡಿದ್ದಾರೆಂದು ರೈತರು ದೂರಿದರು.
ಈ ವೇಳೆ ಹಾಜರಿದ್ದ ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್ ಅವರು ಭದ್ರಾ ಎಸ್‌ಇ ಸುಜಾತ ಅವರೊಂದಿಗೆ ಮಾತನಾಡಿ, ಕೆಳಭಾಗಕ್ಕೆ ಬರಬೇಕಾದ ನೀರಿನ ಪ್ರಮಾಣ ತೋರಿಸಿಕೊಡಿ ಬನ್ನಿ ಎಂದರು.
ಕೊಮಾರನಹಳ್ಳಿ ಬಳಿ ಭದ್ರಾ ನಾಲೆಯಲ್ಲಿ ನೀರಿನ ಪ್ರಮಾಣ ಬಹಳ ಕಡಿಮೆ ಇರುವುದರಿಂದ ಕೆಳಭಾಗಕ್ಕೆ ನೀರು ಹೋಗುತ್ತಿಲ್ಲ. ತೋಟಗಳು ನೀರಿಲ್ಲದೇ ಒಣಗುತ್ತಿವೆ ಎಂದು ಶ್ರೀನಿವಾಸ್ ಅವರು ಇಂಜಿನಿಯರ್‌ಗಳಿಗೆ ಹೇಳಿದರು.
ದೇವರಬೆಳಕೆರೆ ಪಿಕಪ್ ಡ್ಯಾಂನಿಂದ ಬ್ಯಾಲದಹಳ್ಳಿ ಹಳ್ಳಕ್ಕೆ ನೀರು ಬೀಡುವಂತೆ ಇದೇ ವೇಳೆ ಭಾನುವಳ್ಳಿ, ಬೆಳ್ಳೂಡಿ, ಬ್ಯಾಲದಹಳ್ಳಿ, ಎಕ್ಕೆಗೊಂದಿ ರೈತರು ಎಇಇ ಧನಂಜಯ ಅವರನ್ನು ಒತ್ತಾಯಿಸಿದಾಗ ನಂದಿಗಾವಿ ಶ್ರೀನಿವಾಸ್ ಕೂಡಾ ನೀರು ಬೀಡುವಂತೆ ರೈತರ ಪರವಾಗಿ ಹೇಳಿದರು.
ಎಇಇ ಧನಂಜಯ ಮಾತನಾಡಿ, ಅಚ್ಚುಕಟ್ಟಿನ ಎಲ್ಲಾ ತೋಟಗಳಿಗೆ ನೀರು ಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.