ರಾಮನಂತಹ ಪತಿ ಇದ್ದರೂ ಸೀತೆಗೆ ಕಷ್ಟ ತಪ್ಪಲಿಲ್ಲ

ರಾಮನಂತಹ ಪತಿ ಇದ್ದರೂ ಸೀತೆಗೆ ಕಷ್ಟ ತಪ್ಪಲಿಲ್ಲ

ತರಳಬಾಳು ಹುಣ್ಣಿಮೆ ಮಹಿಳಾ ಚಿಂತನ ಗೋಷ್ಠಿಯಲ್ಲಿ ಶ್ರೀ ಕೊಟ್ಟೂರು ಬಸವಲಿಂಗ ಸ್ವಾಮೀಜಿ

ಸಿರಿಗೆರೆ, ಫೆ. 23 – ಮಹಿಳೆಯರು ಸೀತಾಮಾತೆಯ ಕಾಲದಿಂದಲೂ ಅಪಾರ ಕಷ್ಟಗಳನ್ನು ಎದುರಿಸುತ್ತಾ  ಬಂದಿದ್ದಾರೆ. ಮಹಿಳೆಯರು ಜಾಗೃತಿಯಾಗುವ ಮೂಲಕ ಈ ಕಷ್ಟಗಳಿಗೆ ಪರಿಹಾರ ಕಂಡುಕೊಳ್ಳಬೇಕಿದೆ ಎಂದು ಹಂಪಿಯ ಶ್ರೀ ಕೊಟ್ಟೂರು ಸ್ವಾಮಿ ಸಂಸ್ಥಾನ ಮಠದ ಜಗದ್ಗುರು ಶ್ರೀ ಕೊಟ್ಟೂರು ಬಸವಲಿಂಗ ಸ್ವಾಮೀಜಿ ತಿಳಿಸಿದರು.

ಚಿತ್ರದುರ್ಗ ಜಿಲ್ಲೆಯ ಸಿರಿಗೆರೆಯ ತರಳಬಾಳು ಮಠದಲ್ಲಿ ನಡೆಯುತ್ತಿರುವ ತರಳಬಾಳು ಹುಣ್ಣಿಮೆ ಮಹೋತ್ಸವದ ಎರಡನೇ ದಿನದಂದು ಮಹಿಳಾ ಚಿಂತನ ಗೋಷ್ಠಿಯಲ್ಲಿ  ಶ್ರೀಗಳು ಆಶೀರ್ವಚನ ನೀಡಿದರು.

ಸೀತಾ ಮಾತೆಯನ್ನು ನಾವೆಲ್ಲರೂ ಆದರ್ಶವಾಗಿ ಕಾಣುತ್ತೇವೆ. ಸೀತೆಗೆ ರಾಮನಂತಹ ಪುರುಷ ರತ್ನ ಪತಿ ಇದ್ದ. ಲವ – ಕುಶರಂತಹ ಪುತ್ರ ರತ್ನರಿದ್ದರು. ಸೀತೆ ಸಾಕ್ಷಾತ್ ಪಟ್ಟದರಿಸಿಯೇ ಆಗಿದ್ದಳು. ಆದರೂ, ಭೂತಾಯಿ ನಿನ್ನ ಗರ್ಭದಲ್ಲಿ ಸೇರಿಸಿಕೋ ಎಂದು ಕೇಳುವ ಪರಿಸ್ಥಿತಿ ಎದುರಾಯಿತು. ಹೆಣ್ಣು ಮಕ್ಕಳಿಗೆ ಇಷ್ಟೊಂದು ಸಮಸ್ಯೆಗಳಿರುತ್ತವೆ ಎಂದು ಶ್ರೀಗಳು ಹೇಳಿದರು.

ಹೆಣ್ಣು ಮಕ್ಕಳು ಎದುರಿಸುವ ಸಮಸ್ಯೆಗಳು ಗಂಡಿಗೆ ಅರ್ಥವಾಗುವುದಿಲ್ಲ. ಸಮಸ್ಯೆಗಳಿಗೆ ಕೊನೆ ಎಂಬುದೂ ಇರುವುದಿಲ್ಲ. ಆದರೂ, ಈ ಸಮಸ್ಯೆಗಳಿಗೆ ನಾವೇ ಪರಿಹಾರ ಕಂಡುಕೊಳ್ಳಬೇಕಿದೆ. ಅಂಧಾನುಕರಣೆ ಮಾಡದೇ, ಜಾಗೃತರಾಗುವ ಮೂಲಕ ಜೀವನ ಅನುಭವಿಸುವುದನ್ನು ಕಲಿಯಬೇಕಿದೆ ಎಂದು ಶ್ರೀಗಳು ತಿಳಿಸಿದರು.

ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್ ಮಾತನಾಡಿ, ಮಹಿಳೆಯರು ರಾಜಕೀಯ, ಆರ್ಥಿಕ ಹಾಗೂ ಸಾಮಾಜಿಕವಾಗಿ ಸಬಲರಾಗಲು ಶಿಕ್ಷಣ ಬೇಕಿದೆ. ಸಾಕ್ಷರತೆ, ಆತ್ಮವಿಶ್ವಾಸ ಹಾಗೂ ಕೌಶಲ್ಯಗಳ ನೆರವಿನಿಂದ ಸಬಲೀಕರಣ ಸಾಧ್ಯ ಎಂದು ಹೇಳಿದರು.

ಹೊಳಲ್ಕೆರೆ ಶಾಸಕ ಎಂ. ಚಂದ್ರಪ್ಪ ಮಾತನಾಡಿ, ನಾಡಿನ ಕೆರೆಗಳಿಗೆ ನೀರು ತುಂಬಿಸುವ ಮೂಲಕ ತರಳಬಾಳು ಜಗದ್ಗುರು ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರು ರೈತರ ಬಾಳಿಗೆ ಬೆಳಕಾಗಿದ್ದಾರೆ ಎಂದರು.

ಎಸ್.ಎಸ್. ಕೇರ್ ಟ್ರಸ್ಟ್ ಲೈಫ್ ಟ್ರಸ್ಟಿ ಡಾ. ಪ್ರಭಾ ಮಲ್ಲಿಕಾರ್ಜುನ್ ಮಾತನಾಡಿ, ಉತ್ತಮ ಜೀವನ ಶೈಲಿ ಹಾಗೂ ಆಹಾರ ಪದ್ಧತಿಗಳಿಂದ ರೋಗಗಳಿಂದ ದೂರವಿರಬೇಕಿದೆ. ಮಕ್ಕಳ ಸಮಗ್ರ ಕಲಿಕೆಗಾಗಿ ಆಟ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳೂ ಅಗತ್ಯ ಎಂಬುದನ್ನು ಪೋಷಕರು ಅರಿಯಬೇಕಿದೆ. ಮೊಬೈಲ್ ಬಳಕೆ ಕಡಿಮೆ ಮಾಡಿ ಕುಟುಂಬದ ಸದಸ್ಯರ ಜೊತೆ ಹೆಚ್ಚು ಸಮಯ ಕಳೆಯಬೇಕು ಎಂದು ಕಿವಿಮಾತು ಹೇಳಿದರು.

ಜೆ.ಜೆ.ಎಂ. ವೈದ್ಯಕೀಯ ಕಾಲೇಜಿನ ಸೂಕ್ಷ್ಮಾಣು ಜೀವಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಎಂ.ಜಿ. ಉಷಾ ಮಾತನಾಡಿ, ಸೋಂಕು ರೋಗ ತಡೆಗಾಗಿ ಆಹಾರ ತಯಾರಿಕೆಯಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಕಲುಷಿತ ಆಹಾರ ಹಾಗೂ ನೀರಿನಿಂದ ಸೋಂಕು ಬರದಂತೆ ಎಚ್ಚರಿಕೆ ವಹಿಸಬೇಕು. ಸುತ್ತಲಿನ ಪರಿಸರ ಹಾಗೂ ವೈಯಕ್ತಿಕ ನೈರ್ಮಲ್ಯದಿಂದ ಸೋಂಕು ರೋಗ ಹರಡುವಿಕೆ ತಡೆಯಬಹುದು ಎಂದರು.

error: Content is protected !!