ಹರಪನಹಳ್ಳಿ: `ಬಂಗಾರದ ಹಕ್ಕಿ’ ನಾಟಕ ಪ್ರದರ್ಶನದಲ್ಲಿ ಬಿ.ಪರಶುರಾಮ್
ಹರಪನಹಳ್ಳಿ, ಫೆ.21- ನಾಟಕಗಳು ಕೇವಲ ಮನರಂಜನೆಯಲ್ಲ, ಅವುಗಳು ಪ್ರಸ್ತುತ ಸಮಾಜದ ಅಭಿವ್ಯಕ್ತಿಯಾಗಿ ಕೆಲಸ ಮಾಡುತ್ತವೆ ಎಂದು ನಿರ್ದೇಶಕ ಬಿ.ಪರುಶುರಾಮ್ ಹೇಳಿದರು.
ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಇಂದು ಹಮ್ಮಿಕೊಂಡಿದ್ದ `ಬಂಗಾರದ ಹಕ್ಕಿ’ ಎಂಬ ಸಾಮಾಜಿಕ ನಾಟಕವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಾಮಾಜಿಕ ಬದಲಾವಣೆಗೆ ಪೂರಕವಾದ ನಾಟಕಗಳನ್ನು ರಚಿಸುವ ಮೂಲಕ ಜನಜಾಗೃತಿಗೊಳಿಸುವ ಕಾರ್ಯ ಆಗಬೇಕಿದೆ. ಸಮಾಜದಲ್ಲಿನ ಅಂಕು-ಡೊಂಕುಗಳನ್ನು ತಿದ್ದುವ ಮೂಲಕ ನವ ಸಮಾಜ ನಿರ್ಮಾಣದಲ್ಲಿ ರಂಗಭೂಮಿ ಪಾತ್ರ ಅತ್ಯಂತ ಮಹತ್ತರವಾಗಿದೆ. ಹರಪನಹಳ್ಳಿ ಕಲಾವಿದರ ಬೀಡು, ಇಲ್ಲಿನ ಹವ್ಯಾಸಿ ಕಲಾವಿದರು ರಂಗಭೂಮಿಯನ್ನು ಪೋಷಿಸಿಕೊಂಡು ಬರುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಚಿಂತನಾಪರವಾದ ಅವರ ನಾಟಕ ನೋಡಿದರೆ ಬದುಕಿನಲ್ಲಿ ಬದಲಾವಣೆ ಹೊಂದಲು ಸಾಧ್ಯವಾಗುತ್ತದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಉಚ್ಚೆಂಗೆಪ್ಪ ಮಾತನಾಡಿ, ನಾಟಕಗಳು ಸಮಾಜದ ಪ್ರತಿಬಿಂಬವಿದ್ದಂತೆ, ಪುರಾತನ ಕಾಲದಲ್ಲಿ ಸಮಾಜದಲ್ಲಿ ಮನೆ ಮಾಡಿದ್ದ ಮೌಢ್ಯವನ್ನು ನಾಟಕಗಳ ಮೂಲಕ ಎತ್ತಿ ತೋರಿಸಲಾಗುತ್ತಿತ್ತು. `ಕಾವ್ಯೇಶು ನಾಟಕಂ ರಮ್ಯಂ’ ಎನ್ನುವಂತೆ ಕಾವ್ಯಕ್ಕಿಂತ ನಾಟಕವು ರಮ್ಯವಾದುದು.ಇತ್ತೀಚಿನ ದಿನಗಳಲ್ಲಿ ನಾಟಕ ನೋಡುವ ಹವ್ಯಾಸ ಕಡಿಮೆಯಾಗುತ್ತಿದ್ದು, ಇದು ನಿಜಕ್ಕೂ ಆತಂಕಕಾರಿ ಬೆಳವಣಿಗೆ. ನಾಟಕ ಹೆಚ್ಚೆಚ್ಚು ನೋಡುವುದರ ಮೂಲಕ ನಾಟಕ ಕಲೆ ಉಳಿಸಿ ಬೆಳೆಸಿಕೊಂಡು ಹೋಗಬೇಕಾಗಿದೆ ಎಂದರು.
ಜೆ.ಸಿ.ಐ ಮಾಜಿ ಅಧ್ಯಕ್ಷ ಹೇಮಣ್ಣ ಮೋರಿಗೇರಿ ಮಾತನಾಡಿ, ನಾಟಕಗಳು ಸಮಾಜದಲ್ಲಿನ ವಿದ್ಯಮಾನಗಳನ್ನು ಪ್ರತಿಬಿಂಬಿಸುತ್ತವೆ. ಅವುಗಳ ಮೂಲಕ ಕಲಿಯುವುದು ಬಹಳಷ್ಟಿದೆ. ನಾಟಕ ನೋಡುವುದು ಆರೋಗ್ಯಕರ ಬೆಳವಣಿಗೆ, ನಾಟಕ ಸಮಾಜದ ತಪ್ಪು ತಿದ್ದುವ ಮಹಾನ್ ಸಾಧನಗಳಾಗಿವೆ ಎಂದರು.
ಸಹ ನಿರ್ದೇಶಕ ಕುಮಾರ್, ಸಂಗೀತ ಕಲಾವಿದ ಆನಂದ ಕರುವಿನ, ಪಾತ್ರಧಾರಿಗಳಾದ ಜೆ.ಪೂರ್ಣಿಮ, ಲಕ್ಮಿ ಟಿ, ಬಿ.ನೀಲಮ್ಮ, ಎಚ್.ಐಶ್ವರ್ಯ, ಟಿ.ಗಗನ್ ದೀಪ್, ಪಿ.ಎಂ. ರಾಕೇಶ, ಟಿ.ಐಶ್ವರ್ಯ, ಶಿಕ್ಷಕರಾದ ಹೊನ್ನಪ್ಪ, ಶರಣಮ್ಮ ಸೇರಿದಂತೆ ಇತರರು ಇದ್ದರು.