ದಾವಣಗೆರೆ, ಫೆ. 21- ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ರೈತ ಸಂಘ, ಹಸಿರು ಸೇನೆ (ಹುಚ್ಚವ್ವನ ಹಳ್ಳಿ ಮಂಜುನಾಥ್ ಬಣ) ವತಿಯಿಂದ ಚನ್ನಗಿರಿ ತಾಲ್ಲೂಕಿನ ನಲ್ಲೂರು ಗ್ರಾಮದಿಂದ ದಾವಣಗೆರೆ ಜಿಲ್ಲಾಧಿಕಾರಿ ಕಚೇರಿವರೆಗೆ ಹಮ್ಮಿಕೊಂಡಿರುವ ಪಾದಯಾತ್ರೆಯ 3ನೇ ದಿನವಾದ ಇಂದು ಕುಕ್ಕುವಾಡದ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಬಹಿರಂಗ ಸಭೆ ನಡೆಸಲಾಯಿತು.
ಹೋರಾಟಕ್ಕೆ ಬೆಂಬಲ ನೀಡಿದ್ದ ಕಮ್ಯುನಿಸ್ಟ್ ಪಕ್ಷದ ಮುಖಂಡ ಆವರಗೆರೆ ಚಂದ್ರು ಮಾತನಾಡಿ, ಸುಡು ಬಿಸಿಲನ್ನು ಲೆಕ್ಕಿಸದೇ ಪಾದಯಾತ್ರೆ ನಡೆಯುತ್ತಿದೆ. ಈ ಹೋರಾಟಕ್ಕೆ ಕಮ್ಯುನಿಸ್ಟ್ ಪಕ್ಷ ಸದಾ ಬೆಂಬಲವಾಗಿ ನಿಲ್ಲಲಿದೆ. ನಿಮ್ಮ ಹೋರಾಟಕ್ಕೆ ಈಗಾಗಲೇ ಜಿಲ್ಲಾಡಳಿತ ಸೂಕ್ತ ರೀತಿಯಲ್ಲಿ ಸ್ಪಂದಿಸಬೇಕಿತ್ತು. ಆದರೆ ಇಲ್ಲಿಯವರೆಗೆ ಯಾರೂ ಕೂಡ ಸ್ಪಂದಿಸದೇ ಇರುವುದನ್ನು ಗಮನಿಸಿದರೆ ಜಿಲ್ಲಾಡಳಿತ ಗಾಢ ನಿದ್ರೆಯಲ್ಲಿದೆ ಎಂದರು.
ಸಂಘದ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್ ಮಾತನಾಡಿ, ಚುನಾವಣೆ ಮತ್ತು ಚಳವಳಿಗಳನ್ನು ಸಮಾನವಾಗಿ ತೆಗೆದುಕೊಂಡು ಹೋದಾಗ ಮಾತ್ರ ಹೋರಾಟಕ್ಕೆ ಬೆಲೆ ಸಿಗುತ್ತದೆ. ದೆಹಲಿಯಲ್ಲಿ ರೈತರ ಹೋರಾಟ ತೀವ್ರವಾಗಿ ನಡೆಯುತ್ತಿ ದ್ದರೂ, ಕೇಂದ್ರ ಸರ್ಕಾರ ಸ್ಪಂದಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ಎಲ್ಲಾ ರೈತರು ದೆಹಲಿಗೆ ಹೋಗಿ ಕನಿಷ್ಠ ಬೆಂಬಲ ಬೆಲೆ ಕಾಯ್ದೆ ರೂಪ ಪಡೆ ಯಲು ಆಗ್ರಹಿಸಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಬೇಕು ಎಂದು ಕರೆ ನೀಡಿದರು.
ಅರಣ್ಯ ಹಕ್ಕು ಕಾಯ್ದೆಯಡಿ ಸಾಗುವಳಿ ದಾರರಿಗೆ ಸರ್ಕಾರ ಕೂಡಲೇ ಹಕ್ಕುಪತ್ರ ನೀಡಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಸಭೆಯಲ್ಲಿ ಪೂಜಾರ್ ಅಂಜಿನಪ್ಪ ನಿಟುವಳ್ಳಿ, ಅಸ್ತಾಪನಹಳ್ಳಿ ಗಂಡುಗಲಿ, ಹೂವಿನಮಡು ನಾಗರಾಜ್, ಯರವನಾಗ್ತಿಹಳ್ಳಿ ಬಾಲಾಜಿ, ಕುಕ್ಕುವಾಡ ಬಸವರಾಜ್, ಶರಣಮ್ಮ ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು.