ಬಸವ ಜಯಂತಿ ಪ್ರಾರಂಭಿಸಿ ದಾವಣಗೆರೆಗೆ ಕೀರ್ತಿ ನೀಡಿದ ಹರ್ಡೇಕರ್‌ ಮಂಜಪ್ಪ : ಬಸವಪ್ರಭು ಶ್ರೀ

ಬಸವ ಜಯಂತಿ ಪ್ರಾರಂಭಿಸಿ ದಾವಣಗೆರೆಗೆ ಕೀರ್ತಿ ನೀಡಿದ ಹರ್ಡೇಕರ್‌ ಮಂಜಪ್ಪ : ಬಸವಪ್ರಭು ಶ್ರೀ

ದಾವಣಗರೆ, ಫೆ. 18 – ಬಸವ ಜಯಂತಿಯನ್ನು ಪ್ರಾರಂಭಿಸಿ ದಾವಣಗೆರೆಗೆ ಹೊಸ ಕೀರ್ತಿಯನ್ನು ನೀಡಿದವರು ಹರ್ಡೇಕರ್‌ ಮಂಜಪ್ಪನವರು ಎಂದು ಮುರುಘಾ ಮಠದ ಉಸ್ತುವಾರಿಗಳಾದ ಶ್ರೀ ಬಸವಪ್ರಭು ಸ್ವಾಮೀಜಿ ಶ್ಲ್ಯಾಘಿಸಿದರು.

ನಗರದ ಹರ್ಡೇಕರ್‌ ಮಂಜಪ್ಪನವರ ವೃತ್ತ ದಲ್ಲಿ ಏರ್ಪಡಿಸಿದ್ದ ಕರ್ನಾಟಕದ ಹರ್ಡೇಕರ್‌ ಮಂಜಪ್ಪನವರ 138 ನೇ ಜಯಂತಿ ಆಚರಣೆ ಯ ನಿಮಿತ್ತ ಅವರ   ಪುತ್ಥಳಿಗೆ ಪುಷ್ಪಾರ್ಚನೆ ಮಾಡಿ  ನೇತೃತ್ವ ವಹಿಸಿಕೊಂಡು ಶ್ರೀಗಳು ಮಾತನಾಡಿದರು.

ಹರ್ಡೇಕರ್‌ ಮಂಜಪ್ಪನವರು ಒಬ್ಬ ವಿಭೂತಿ ಪುರುಷರು, ಹಣೆಯ ಮೇಲೆ ಬಸವ ಪ್ರಜ್ಞೆ, ಮೈಮೇಲೆ ಗಾಂಧಿ ಪ್ರಜ್ಞೆಗಳನ್ನು ಸಂಕೇತಿಸುವಂತೆ ವಿಭೂತಿ – ಖಾದಿಗಳ ಆದರ್ಶದ ಸಂಗಮ ವಾಗಿದ್ದಾರೆ. ಸಮಾನತೆಯ ಹರಿಕಾರ ವಿಶ್ವಗುರು ಬಸವಣ್ಣನವರ ಜಯಂತಿಯನ್ನು ಪ್ರಾರಂಭಿಸುವ ಮೂಲಕ ದಾವಣಗೆರೆಗೆ ಹೊಸ ಕೀರ್ತಿ ಬಂದಿದೆ. ಇಲ್ಲಿಯವರೆಗೆ ಬೆಣ್ಣೆ ನಗರಿ,  ವಿದ್ಯಾ ನಗರಿ ಎಂದು ಪ್ರಸಿದ್ಧಿ ಪಡೆದಿತ್ತು. ಈಗ ಬಸವ ಜಯಂತಿಯ ಗಂಗೋತ್ರಿ ನಗರಿ ಎಂದು ಖ್ಯಾತಿಯನ್ನು ಗಳಿಸಿದೆ. ಅದಕ್ಕೆ ಕಾರಣ ಹರ್ಡೇಕರ್‌ ಮಂಜಪ್ಪನವರು ಆಗಿದ್ದಾರೆ ಎಂದು ಸ್ಮರಿಸಿದರು.

ಸ್ವಾತಂತ್ರ್ಯದ ಚಳವಳಿಗಾಗಿ ಬಸವ ಜಯಂತಿಯನ್ನು 1913 ರಲ್ಲಿ ದಾವಣಗೆರೆ ವಿರಕ್ತಮಠದಲ್ಲಿ ಅಂದಿನ ಮಠಾಧೀಶರಾದ ಶ್ರೀ ಮೃತ್ಯುಂಜಯ ಅಪ್ಪಗಳೊಂದಿಗೆ ಪ್ರಾರಂಭಿಸಿದರು. ಅಂದಿನಿಂದ ಪ್ರಾರಂಭವಾದ ಬಸವ ಜಯಂತಿ ಇಂದು ವಿಶ್ವದಾದ್ಯಂತ ನಡೆಯಲಿಕ್ಕೆ ಹರ್ಡೇಕರ್‌ ಮಂಜಪ್ಪನವರು ಕಾರಣರಾಗಿದ್ದಾರೆ. ಅಷ್ಟೇ ಅಲ್ಲದೇ ಧನುರ್ಧಾರಿ ಪತ್ರಿಕೆಯನ್ನು ಪ್ರಾರಂಭಿಸಿ ಸ್ವಾತಂತ್ರ್ಯ ಹೋರಾಟದಲ್ಲಿ ಸಾವಿರಾರು ಯುವಕ ರನ್ನು ಸಂಘಟನೆ ಮಾಡಿ, ಜಾಗೃತಿ ಮೂಡಿಸಿದರು. ಅವರಲ್ಲಿರುವ ದುಶ್ಚಟಗಳನ್ನು ಬಿಡಿಸಿ  ಖಾದಿ ಬಟ್ಟೆಗಳನ್ನು  ತಯಾರಿಸುವ ವಿದ್ಯೆಯನ್ನು ಕಲಿಸಿ, ಸ್ವದೇಶಿ ಚಳುವಳಿಯನ್ನು ಪ್ರಾರಂಭಿಸಿದರು. ಮಹಿಳೆಯರಿಗೆ ಅಕ್ಷರ ಅಭ್ಯಾಸವನ್ನು ಮಾಡಿಸಿದರು. ರಾಟಿ ಉದ್ಯೋಗವನ್ನು ಕಲಿಸಿದರು. ಮಹಿಳೆಯರ ಜಾಗೃತಿಗಾಗಿ 1935 ರಲ್ಲಿ ವೈರಾಗ್ಯ ನಿಧಿ ಅಕ್ಕಮಹಾದೇವಿಯವರ ಜಯಂತಿ ಪ್ರಾರಂಭಿದರು. ಸ್ವದೇಶಿ ಚಳುವಳಿ, ರಾಷ್ಟ್ರೀಯತೆ, ಸ್ವಚ್ಚತಾ ಕಾರ್ಯ, ಆರೋಗ್ಯ ಸೂತ್ರ, ಬಸವೇಶ್ವರ ಸೇವಾದಳ ಮುಂತಾದ ಕಾರ್ಯಗಳನ್ನು ಮಾಡಿ ಇತಿಹಾಸ ವಾಗಿದ್ದಾರೆ. ಅವರು ಮಾಡಿರುವ ಕಾರ್ಯಗಳನ್ನು ನಾವು ಸ್ಮರಿಸುತ್ತಾ, ಅವರ ಆದರ್ಶಗಳನ್ನು ಪಾಲಿಸೋಣ ಎಂದು ಸ್ವಾಮೀಜಿ ಹೇಳಿದರು.

ಸಮಾರಂಭದಲ್ಲಿ ಬಸವಕಲಾ ಲೋಕದ ಶಶಿಧರ್, ವೀರಶೈವ ತರುಣ ಸಂಘದ ಕಣಕುಪ್ಪಿ ಮುರುಗೇಶಪ್ಪ, ಜಾಗತಿಕ ಲಿಂಗಾಯತ ಮಹಾ ಸಭಾದ ರುದ್ರೇಗೌಡ, ಬಸವ ಬಳಗದ ವೀಣಾ ಮಂಜುನಾಥ್,  ಚಂದ್ರಕಲಾ ಹಾಗೂ ಇತರರು ಇದ್ದರು.

error: Content is protected !!