ಸಕಲ ಜೀವರಾಶಿಗೂ ಸೂರ್ಯ ಆರೋಗ್ಯದಾತ

ಸಕಲ ಜೀವರಾಶಿಗೂ ಸೂರ್ಯ ಆರೋಗ್ಯದಾತ

ದಾವಣಗೆರೆ, ಫೆ.18- ಆರೋಗ್ಯಂ ಭಾಸ್ಕರಾಧಿಚ್ಛೆತ್  ಎಂಬಂತೆ ನಮ್ಮೆಲ್ಲರ ಆರೋಗ್ಯದ ಮೂಲಪುರುಷ ಸೂರ್ಯ ನಾಗಿದ್ದಾನೆ. ಸೂರ್ಯ ಸಕಲ ಜೀವರಾಶಿಗೂ ಆರೋಗ್ಯದಾತ ಎಂದು ಯೋಗ ತಜ್ಞ ರಾಘವೇಂದ್ರ ಗುರೂಜಿ ಅಭಿಪ್ರಾಯಪಟ್ಟರು.

ನಗರದ ಆದರ್ಶ ಯೋಗ ಪ್ರತಿಷ್ಠಾನಂ ಶ್ರೀ ಮಹಾಮ್ಮಯಿ ವಿಶ್ವ ಯೋಗ ಮಂದಿರ ಹಾಗೂ ಯೋಗ ಚಿಕಿತ್ಸಾ ಕೇಂದ್ರದಲ್ಲಿ ರಥಸಪ್ತಮಿ ಪ್ರಯುಕ್ತ ಹಮ್ಮಿಕೊಳ್ಳ ಲಾಗಿದ್ದ ಸಾಮೂಹಿಕ 108 ಸೂರ್ಯ ನಮಸ್ಕಾರ ಯೋಗಯಜ್ಞ ಕಾರ್ಯಕ್ರಮ ದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಮಾಘ ಮಾಸ, ಶುಕ್ಲ ಪಕ್ಷದ ಸಪ್ತಮಿಯಂದು ದೇಶಾದ್ಯಂತ ರಥಸಪ್ತಮಿ ಹಬ್ಬವನ್ನು ಆಚರಿಸಲಾಗು ವುದು. ಸೂರ್ಯ ನಮಗೆ ಪ್ರತ್ಯಕ್ಷವಾಗಿ ಕಾಣುವ ದೈವ ಸ್ವರೂಪಿ,
ವಿಗ್ರಹ ಆರಾಧನೆ ಬಳಕೆಗೆ ಬರುವ ಮೊದಲಿನಿಂದಲೂ ಸೂರ್ಯಾರಾಧನೆಗೆ ಹೆಚ್ಚು ಪ್ರಾಶಸ್ತ್ಯ ಇತ್ತು. ಆಹಾರಕ್ಕಾಗಿ ರೋಗ ನಿವಾರಣೆಗಾಗಿ ಸೂರ್ಯೋಪಾಸನೆ ಮಾಡಬೇಕೆಂದು ಸ್ಕಂದ, ವರಾಹ ಪುರಾಣಗಳಲ್ಲಿ ಹೇಳಲಾಗಿದೆ. ಸದೃಢ ದೇಹ, ಆರೋಗ್ಯ ಸ್ವಾಸ್ಥ್ಯವನ್ನು ಬಯಸುವವರು ಸೂರ್ಯನ ಆರಾಧನೆಯನ್ನು ಮಾಡಿದರೆ ಪೂರ್ಣಫಲ ಸಿಗುವುದು ನಿಶ್ಚಿತ. ಸೂರ್ಯೋಪಾಸನೆಯನ್ನು ಪ್ರಮುಖವಾಗಿ ಭಾರತ, ಮಧ್ಯ ಆಫ್ರಿಕಾ, ಈಜಿಪ್ಟ್, ಗ್ರೀಸ್ ಹಾಗೂ ಮಧ್ಯ ಏಷ್ಯಾಗಳಲ್ಲಿ ಆಚರಿಸಲಾಗುತ್ತದೆ. 

ಯೋಗಾಭ್ಯಾಸದಲ್ಲಿ ಮೊದಲ ಪ್ರಾಶಸ್ತ್ಯ ಸೂರ್ಯ ನಮಸ್ಕಾರಕ್ಕೆ ಇದೆ. ಕಾರಣ ಮನಸ್ಸು, ದೇಹ ಮತ್ತು ಉಸಿರಾಟ ವ್ಯವಸ್ಥೆಗಳಿಗೆ ವಿಶೇಷ ಪರಿಣಾಮ ಒಟ್ಟಾಗಿ ಲಭಿಸುವುದು. ಭೂಮಿಯಲ್ಲಿನ ಸಕಲ ಜೀವರಾಶಿಗಳ ಚಟುವಟಿಕೆಗಳು ಸೂರ್ಯನಿಂದ ನಡೆಯುತ್ತದೆ. ಸೂರ್ಯನಿಲ್ಲದೆ ಜೀವನದ ಅಸ್ತಿತ್ವವಿರಲು ಸಾಧ್ಯವಿಲ್ಲ. ಈ ದಿನ ಯಾರು ಶ್ರದ್ಧಾ ಭಕ್ತಿಯಿಂದ 108 ಸೂರ್ಯ ನಮಸ್ಕಾರವನ್ನು ಮಾಡುತ್ತಾರೋ ಅವರಿಗೆ ಸದೃಢ ದೇಹ, ಆರೋಗ್ಯವಂತ ಮನಸ್ಸು, ಲವಲವಿಕೆ, ತೇಜಸ್ಸು ಲಭಿಸಿ ದೀರ್ಘಾಯುಷಿಗಳಾಗಿ ಬಾಳುತ್ತಾರೆ ಎಂದು ರಥ ಸಪ್ತಮಿಯ ವಿಶೇಷತೆಯನ್ನು ತಿಳಿಸಿದರು.

ಪುರೋಹಿತ ಅಂತರವಳ್ಳಿ ಮುರಳೀಧರ ಆಚಾರ್ ಅವರ ಮಾರ್ಗದರ್ಶನದಲ್ಲಿ ಸೂರ್ಯ ಯಜ್ಞ ಪೂಜೆಯನ್ನು ಅಭಿಯಂತರ ಚೇತನ್ ಮತ್ತು ಶ್ರೀಮತಿ ಶ್ವೇತಾ ಒಡೆಯರ್ ದಂಪತಿ ಸರ್ವಪೂಜೆ ಕೈಂಕರ್ಯವನ್ನು ನಡೆಸಿಕೊಟ್ಟರು. 

ವಿಶೇಷ ಹೂವಿನ ಅಲಂಕಾರ ಸೇವೆಯನ್ನು ಸಗಟು ಔಷಧಿ ವ್ಯಾಪಾರಿ ಸಂದೀಪ್ ಒಡೋನಿ ಕುಟುಂಬದವರು, ಅಂಚೆ ಇಲಾಖೆಯ ಶ್ರೀಮತಿ ವೇದಾವತಿ ಡಿ.ಎಂ.ಎಸ್., ನಿವೃತ್ತ ತಹಶೀಲ್ದಾರ್ ವಿಶ್ವನಾಥಯ್ಯ ಕೆ.ಎಂ., ಅಭಿಯಂತರ ಲಕ್ಷ್ಮಣ್ ಹೆಚ್.ಎನ್. ಫಲಸೇವೆಯನ್ನು, ಪ್ರಸಾದ ಸೇವೆಯನ್ನು ಜಿಲ್ಲಾಧಿಕಾರಿ ಕಛೇರಿ ಸಿಬ್ಬಂದಿ ಹೆಚ್. ಸಂತೋಷ್ ಮಾಡಿದರು. ರಂಗೋಲಿ ಸೇವೆ ಶ್ರೀಮತಿ ಗೌರಮ್ಮ, ಮುಖೇಶ್‍ದೇವ್, ಪೃಥ್ವಿದೇವ್ ಇನ್ನಿತರರು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು. 

ಕಾರ್ಯಕ್ರಮದಲ್ಲಿ ಯೋಗ ಶಿಕ್ಷಕ ವೀರ ಭದ್ರಯ್ಯಸ್ವಾಮಿ ಮತ್ತು ಅವರ ಶಿಷ್ಯ ವರ್ಗ, ಜೀವ ವಿಮಾ ನಿಗಮದ ಎ.ಆರ್. ಶೇಷಾದ್ರಿ, ಉದ್ಯಮಿ ಆಶಾ ಪ್ರದೀಪ್, ಮೀಸಲು ಆರಕ್ಷಕ ಚಂದ್ರ, ಮಹಾಂತೇಶ್ ಮುಂತಾದವರು ಭಾಗವಹಿಸಿದ್ದರು.

error: Content is protected !!