ಅಹಂನಿಂದ ಸೋಹಂ ಎನ್ನುವುದೇ ನಾಯಕತ್ವ

ಅಹಂನಿಂದ ಸೋಹಂ ಎನ್ನುವುದೇ ನಾಯಕತ್ವ

ದಾವಣಗೆರೆ, ಫೆ. 18 – ವೈಯಕ್ತಿಕ ಸ್ವಾರ್ಥದ ಬದಲು ಸಮಾಜಕ್ಕೆ ಕೊಡುಗೆ ನೀಡುವತ್ತ ಚಿಂತನೆಯನ್ನು ಬದಲಿಸಿ ಕೊಳ್ಳುವುದು ನಾಯಕತ್ವದ ಪ್ರಮುಖ ಗುಣ ಎಂದು ಮಾಜಿ ಶಾಸಕ ಮಹಿಮಾ ಪಟೇಲ್ ಅಭಿಪ್ರಾಯ ಪಟ್ಟಿದ್ದಾರೆ.

ನಗರದ ಜಿ.ಎಂ.ಐ.ಟಿ. ಕಾಲೇಜಿನಲ್ಲಿ ಆಯೋಜಿಸಲಾಗಿದ್ದ `ಭವಿಷ್ಯಕ್ಕಾಗಿ ನಾಯಕತ್ವದ ಗುಣ’ ಎಂಬ ವಿಷಯದ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

`ಅಹಂನಿಂದ ಸೋಹಂ’ ಎಂಬುದರ ಕಡೆ ನಾವು ನಡೆಯಬೇಕಿದೆ. ಸಮಾಜಕ್ಕೆ ಕೊಡುಗೆ ನೀಡುವ ಸಲುವಾಗಿ ನಮ್ಮ ಆಲೋಚನೆಗಳನ್ನು ಬದಲಿಸಿಕೊಳ್ಳಬೇಕಿದೆ. ಇದು ನಾಯಕತ್ವಕ್ಕೆ ಅಗತ್ಯ ಪ್ರಮುಖ ಗುಣ ಎಂದು ಹೇಳಿದರು.

ಪ್ರತಿ ವ್ಯಕ್ತಿಯ ಬೆಳವಣಿಗೆಗೆ ಹಣ ಬೇಕು. ಆದರೆ, ಕೇವಲ ಆದಾಯದಿಂದಷ್ಟೇ ಜೀವನ ಸಂತೃಪ್ತವಾಗದು. ಆದಾಯ, ಆರೋಗ್ಯ ಹಾಗೂ ಆನಂದ ಮೂರೂ ಬೇಕಿದೆ ಎಂದು ತಿಳಿಸಿದರು.

ಉದ್ಯಮಗಳನ್ನು ಮುನ್ನಡೆಸುವವರು ಹಣ ಮಾಡುವ ಯಂತ್ರವಾಗ ಬಾರದು, ಅದೇ ರೀತಿ ಉದ್ಯೋಗಿಗಳು ದುಡಿಮೆಗೆ ಸೀಮಿತವಾಗ ಬಾರದು. ಮಾನವ ದೃಷ್ಟಿ ಯಿಂದ ಸಮಾಜಕ್ಕೆ ಕೊಡುಗೆ ನೀಡುವ ಬಗ್ಗೆ ಚಿಂತಿಸಬೇಕು ಎಂದು ಪಟೇಲ್ ಹೇಳಿದರು.

ಇನ್ನೋರ್ವ ಮುಖ್ಯ ಅತಿಥಿ ಕರುಣ ಜೀವ ಕಲ್ಯಾಣ ಟ್ರಸ್ಟ್‌ನ ಶಿವನಕೆರೆ ಬಸವಲಿಂಗಪ್ಪ ಮಾತನಾಡಿ, ನಾವಿಂದು ಆರ್ಥಿಕವಾಗಿ ಮುಂದುವರೆದಿದ್ದರೂ ಸಾಮಾಜಿಕವಾಗಿ ಹಿಂದುಳಿದಿದ್ದೇವೆ. ಇದರಿಂದಾಗಿ ವೃದ್ಧಾಶ್ರಮಗಳು ಹೆಚ್ಚಾಗುತ್ತಿವೆ ಎಂದರು. ಪ್ರೀತಿ, ಸಮಚಿತ್ತತೆ, ಏಕತೆ, ಎಚ್ಚರ ಹಾಗೂ ವಿವೇಕದಂತಹ ಗುಣಗಳನ್ನು ಹೊಂದಿದಾಗ ನಾಯಕತ್ವ ಬೆಳೆಸಿಕೊಳ್ಳಲು ಸಾಧ್ಯ ಎಂದವರು ತಿಳಿಸಿದರು. ಕ್ಲಾರಿಟಿ ಬ್ರಿಡ್ಜ್‌ನ ಸ್ಥಾಪಕಿ ಉಷಾ ಬಾಲಕೃಷ್ಣ ಮಾತ ನಾಡಿ, ತಂತ್ರಜ್ಞಾನ ವಲಯ ಬಹಳ ವೇಗ ವಾಗಿ ಬದಲಾಗುತ್ತಿದೆ. ತಂತ್ರಜ್ಞಾನ ವಲಯದ ಒಂದು ಹೆಜ್ಜೆ ಇಡೀ ಭವಿಷ್ಯವನ್ನು ಬದಲಿಸುತ್ತಿದೆ. ಬೃಹತ್ ಕಂಪನಿಗಳು ಒಂದು ತಪ್ಪು ಹೆಜ್ಜೆ ಇಟ್ಟು ಇಡೀ ಮಾರುಕಟ್ಟೆ ಕಳೆದುಕೊಂಡಿವೆ. ಈ ಹಿನ್ನೆಲೆಯಲ್ಲಿ ನಾಯಕತ್ವದ ಗುಣದಿಂದ ದೂರದೃಷ್ಟಿ ಹೊಂದುವುದು ಯಶಸ್ಸಿಗೆ ಅತ್ಯಗತ್ಯ ಎಂದರು.

ಜಿ.ಎಂ.ಐ.ಟಿ. ಪ್ರಾಂಶುಪಾಲ ಎಂ.ಬಿ. ಸಂಜಯ್ ಪಾಂಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಂಪ್ಯೂಟರ್ ಸೈನ್ಸ್ ಅಂಡ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಬಿ.ಎನ್. ವೀರಪ್ಪ, ಸಿ.ಎಸ್.ಇ. ಉಪನ್ಯಾಸಕರಾದ ಎಸ್.ಟಿ. ಮಾರುತಿ, ಬಿ.ಪಿ. ದೀಪು ಮತ್ತಿತರರು ಉಪಸ್ಥಿತರಿದ್ದರು. ಜಿ.ಜೆ. ಲಕ್ಷ್ಮಿ ಸಲೇರ್ ಪ್ರಾರ್ಥಿಸಿದರು. ಒ. ಸಿಂಚನ ಸ್ವಾಗತಿಸಿದರು. ಜಿ.ಬಿ. ರಕ್ಷಿತ ನಿರೂಪಿಸಿದರೆ, ಎಂ.ಒ. ಯಶಸ್ವಿನಿ ವಂದಿಸಿದರು.

error: Content is protected !!