ಹಟ್ಟಿಗಳಲ್ಲಿ ಮನೆಗೊಬ್ಬ ಅಧಿಕಾರಿ ಸೃಷ್ಟಿಗೆ ಸಂಕಲ್ಪ ಮಾಡಿ

ಹಟ್ಟಿಗಳಲ್ಲಿ ಮನೆಗೊಬ್ಬ ಅಧಿಕಾರಿ ಸೃಷ್ಟಿಗೆ ಸಂಕಲ್ಪ ಮಾಡಿ

ಮಲೇಬೆನ್ನೂರು : ದೇವಸ್ಥಾನದ ಕಳಸಾರೋಹಣದಲ್ಲಿ ಮಾದಾರ ಚೆನ್ನಯ್ಯ ಸ್ವಾಮೀಜಿ ಕರೆ

ಮಲೇಬೆನ್ನೂರು, ಫೆ.15- ದೇವಸ್ಥಾನಗಳು ಈ ಹಿಂದೆ ಶ್ರದ್ಧಾ-ಭಕ್ತಿಯ ಕೇಂದ್ರದ ಜೊತೆಗೆ ಸಾಂಸ್ಕೃತಿಕ ಕಲಿಕಾ ಕೇಂದ್ರಗಳೂ ಆಗಿದ್ದವು ಎಂದು ಚಿತ್ರದುರ್ಗ ಮಾದಾರ ಚೆನ್ನಯ್ಯ ಗುರುಪೀಠದ ಶ್ರೀ ಬಸವ ಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಹೇಳಿದರು.

ಅವರು, ಗುರುವಾರ ಪಟ್ಟಣದ ಎ.ಕೆ.ಕಾಲೋನಿಯಲ್ಲಿರುವ ಶ್ರೀ ದುರ್ಗಾಂಬಿಕಾ ದೇವಸ್ಥಾನದ ನೂತನ ಗೋಪುರಕ್ಕೆ ಕಳಾಸರೋಹಣ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ದೇವಸ್ಥಾನಗಳಲ್ಲಿ ಭಜನೆ, ಕೋಲಾಟ, ವಯಸ್ಕರ ಶಿಕ್ಷಣ ಕಲಿಕೆಯ ಜೊತೆಗೆ ಸತ್ಸಂಗ ಮತ್ತು ಗ್ರಾಮದ ಹಿರಿಯರು ಕುಳಿತು ಒಳ್ಳೆಯ ಚಿಂತನೆ ಮಾಡುತ್ತಿದ್ದರು. ಆದರೀಗ ಕೆಲವು ಕಡೆಗಳಲ್ಲಿ ದೇವಸ್ಥಾನಗಳು ಜೂಜಾಟ ಹಾಗೂ ನಿದ್ರೆಯ ಕೇಂದ್ರಗಳಾಗಿವೆ ಎಂದು ಬೇಸರ ವ್ಯಕ್ತಪಡಿಸಿದ ಶ್ರೀಗಳು, ದೇವಸ್ಥಾನಗಳು ಪರಿವರ್ತನೆಗಳಾಗಿದ್ದು, ಅವುಗಳನ್ನು ಕಟ್ಟಿಸಿರುವ ಉದ್ದೇಶವನ್ನು ಮೊದಲು ನಾವು ಅರ್ಥಮಾಡಿಕೊಳ್ಳಬೇಕು. ಪಾವಿತ್ರ್ಯತೆಗೆ ಒತ್ತು ಕೊಟ್ಟು ದೇವಸ್ಥಾನ ಎಲ್ಲರನ್ನೂ ಆಕರ್ಷಿಸುವಂತೆ ಮಾಡಬೇಕು. ಇತ್ತೀಚೆಗೆ ಕಾಲೋನಿ – ಹಟ್ಟಿಗಳಲ್ಲಿ ದೇವಸ್ಥಾನಗಳನ್ನು ಬಹಳ ಸುಂದರವಾಗಿ ಕಟ್ಟಿಸುತ್ತಿರುವುದು ಖುಷಿ ತಂದಿದೆ. ದೇವಸ್ಥಾನ – ಮಠ – ಮನೆಗಳನ್ನು ಕಟ್ಟುವುದರ ಜೊತೆಗೆ ನಾವು ಸಾಮಾಜಿಕವಾಗಿ ಮುಖ್ಯವಾಹಿನಿಗೆ ಬರುವ ನಿಟ್ಟಿನಲ್ಲಿ ಜಾಗೃತರಾಗಬೇಕು. ಅದಕ್ಕಾಗಿ ಎಲ್ಲರೂ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ, ಸಂಸ್ಕಾರ ಕೊಡಿಸಿ ಅವರನ್ನು ಸುಂಸ್ಕೃತರನ್ನಾಗಿ ಮಾಡಬೇಕೆಂದು ಕರೆ ನೀಡಿದರು.

ಪೋಷಕರು ಗಂಡು ಮಗನಿಗೆ ಸರಿಸಮಾನವಾಗಿ ಹೆಣ್ಣು ಮಗುವಿಗೂ ಶಿಕ್ಷಣ ಕೊಡಿಸಬೇಕು. ಆಗ ನಿಮ್ಮ ಮನೆಯಲ್ಲಿ ಜ್ಞಾನದ ಜ್ಯೋತಿ ಬೆಳಗುತ್ತದೆ. ಪ್ರತಿ ಮನೆಯಲ್ಲೂ ಒಬ್ಬ ಅಧಿಕಾರಿ ಆಗಬೇಕೆಂಬುದು ನಮ್ಮ ಆಶಯವಾಗಿದ್ದು, ರಾಜಕಾರಣಿಗಳಿಗೆ ನೀವು ದೇವಸ್ಥಾನ – ಸಮುದಾಯಗಳನ್ನು ಕೇಳುವುದನ್ನು ಬಿಟ್ಟು ಶಾಲೆ – ಶಿಕ್ಷಣವನ್ನು ಕೇಳುವಂತಾಗಬೇಕೆಂದು ಸ್ವಾಮೀಜಿ ಶೋಷಿತ ಜನರಿಗೆ ಕಿವಿಮಾತು ಹೇಳಿದರು.

ಈ ದೇವಸ್ಥಾನ ಕಟ್ಟುವಾಗ ಡಾ. ಬಿ.ಚಂದ್ರಶೇಖರ್ ಅವರು, ಇಟ್ಟಿಗೆ, ಸಿಮೆಂಟ್ ನೀಡಿರುವ ವಿಷಯ ತಿಳಿದು ಸಂತೋಷವಾಗಯಿತೆಂದು ಶ್ರೀಗಳು ಅವರನ್ನು ಸನ್ಮಾನಿಸಿ, ಗೌರವಿಸಿದರು.

ವೈದ್ಯ ಡಾ. ಬಿ.ಚಂದ್ರಶೇಖರ್, ಎಪಿಎಂಸಿ ಮಾಜಿ ಅಧ್ಯಕ್ಷ ಜಿ.ಮಂಜುನಾಥ್ ಪಟೇಲ್, ಬಿಜೆಪಿ ಮುಖಂಡ ಚಂದ್ರಶೇಖರ್ ಪೂಜಾರ್, ಇನ್‌ಸೈಟ್ಸ್ ಸಂಸ್ಥಾಪಕ ಜಿ.ಬಿ.ವಿನಯ್‌ಕುಮಾರ್, ಪುರಸಭೆ ಮುಖ್ಯಾಧಿಕಾರಿ ಎ.ಸುರೇಶ್, ಉಪತಹಶೀಲ್ದಾರ್ ಆರ್.ರವಿ, ಪುರಸಭೆ ಸದಸ್ಯರಾದ ಗೌಡ್ರ ಮಂಜಣ್ಣ, ನಯಾಜ್, ದಾದಾಪೀರ್, ಪಿ.ಆರ್.ರಾಜು, ಕೆ.ಪಿ.ಗಂಗಾಧರ್ ಮತ್ತು ಇತರರು ಮಾತನಾಡಿದರು.

ಪುರಸಭೆ ಸದಸ್ಯರಾದ ಶ್ರೀಮತಿ ಸುಧಾ ಪಿ.ಆರ್.ರಾಜು, ಖಲೀಲ್, ಬೆಣ್ಣೆಹಳ್ಳಿ ಸಿದ್ದೇಶ್, ಶಬ್ಬೀರ್ ಖಾನ್, ಷಾ ಅಬ್ರಾರ್, ಟಿ.ಹನುಮಂತಪ್ಪ, ಜಿಗಳೇರ ಹಾಲೇಶಪ್ಪ, ಭೋವಿಕುಮಾರ್, ಓ.ಜಿ.ಕುಮಾರ್, ಎಂ.ಬಿ.ರುಸ್ತುಂ, ಭಾನುವಳ್ಳಿ ಸುರೇಶ್, ಮಹಾಲಿಂಗಪ್ಪ, ಪಿ.ಆರ್.ಕುಮಾರ್, ಪಿ.ಹೆಚ್.ಶಿವಕುಮಾರ್, ಕುಂಬಳೂರು ವಾಸು, ಕಾಲೋನಿಯ ಎ.ಕೆ.ನರಸಿಂಹಪ್ಪ, ಎ.ಕೆ.ಲೋಕೇಶ್, ಎ.ಕೆ.ನಾಗರಾಜ್ ಸೇರಿದಂತೆ ಇನ್ನೂ ಅನೇಕರು ಈ ವೇಳೆ ಹಾಜರಿದ್ದರು.

ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಶ್ರೀನಿವಾಸ್ ದಾಸಕರಿಯಪ್ಪ, ಉದ್ಯಮಿ ರಮೇಶ್ ಮತ್ತಿತರರು ಭಾಗವಹಿಸಿದ್ದರು.

ಶಿಕ್ಷಕ ವೀರಭದ್ರಾಚಾರ್ ನಿರೂಪಿಸಿದರು. ಶಿಕ್ಷಕ ಎಸ್.ಕೆ.ಕುಮಾರ್ ಸ್ವಾಗತಿಸಿದರು.

error: Content is protected !!