ಬೆಳ್ಳೂಡಿ : ದೇವಸ್ಥಾನದ ಉದ್ಘಾಟನೆಯಲ್ಲಿ ಕಾಗಿನೆಲೆ ಶ್ರೀಗಳ ಕರೆ
ಮಲೇಬೆನ್ನೂರು, ಫೆ. 15 – ಮಾರಿ ಹಬ್ಬಗಳಲ್ಲಿ ಕುರಿ-ಕೋಳಿ ಬಲಿ ಕೊಡದೆ ಹಬ್ಬಗಳನ್ನು ಆಚರಿಸಿ ಎಂದು ಕಾಗಿನೆಲೆ ಕನಕಗುರು ಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಹೇಳಿದರು.
ಅವರು ಗುರುವಾರ ಬೆಳ್ಳೂಡಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಚಂದ್ರಗುತ್ತೆಮ್ಮ ದೇವಿ ದೇವಸ್ಥಾನದ ಉದ್ಘಾಟನೆ ಹಾಗೂ ದೇವಿಯ ಪ್ರಾಣ ಪ್ರತಿಷ್ಠಾಪನಾ ಸಮಾರಂಭದ ದಿವ್ಯ ಸಾನ್ನಿಧ್ಯವಹಿಸಿ ಮಾತನಾಡಿದರು.
ಮಾರಿ ಹಬ್ಬಗಳಿಗೆ ದುಂದುವೆಚ್ಛ ಮಾಡುವ ಹಣವನ್ನು ನಿಮ್ಮ ಹೆಣ್ಣು ಮಗಳ ಹೆಸರಿನಲ್ಲಿ ಠೇವಣಿ ಮಾಡಿ, ಮುಂದೆ ಅವಳ ಮದುವೆಗೆ ಆ ಹಣ ಸಹಕಾರಿಯಾಗುತ್ತದೆ ಎಂದ ಸ್ವಾಮೀಜಿ, ಸಾಲ ಮಾಡಿ ಮಾರಿಹಬ್ಬ ಮಾಡುವುದನ್ನು ನೀವು ಕೈಬಿಡದ ಹೊರತು ನಿಮ್ಮ ಉದ್ಧಾರ ಸಾಧ್ಯವಿಲ್ಲ ಎಂದು ನೇರವಾಗಿ ಹೇಳಿದರು.
ಪ್ರತಿ ಮನೆಯಲ್ಲೂ ಮಕ್ಕಳ ಶಿಕ್ಷಣಕ್ಕೆ ಒತ್ತು ಕೊಟ್ಟು ಅವರಿಗೆ ಒಳ್ಳೆಯ ಸಂಸ್ಕಾರ ನೀಡಿದರೆ ಅವರು ಸಮಾಜದ ಆಸ್ತಿಯಾಗುತ್ತಾರೆ. ಈ ನಿಟ್ಟಿನಲ್ಲಿ ಶೋಷಿತ ಜನರು ಹಿರಿಯರ ಹಬ್ಬ-ಮಾರಿ ಹಬ್ಬಗಳಿಗೆ ಬ್ರೇಕ್ ಹಾಕಿ, ಸುಂದರ ಸಂಸ್ಕಾರಗಳನ್ನು ಮೈಗೂಡಿಸಿಕೊಂಡು ಸಮಾಜದ ಮುಖ್ಯವಾಹಿನಿಗೆ ಬನ್ನಿ ಎಂದು ಸ್ವಾಮೀಜಿ ಕಿವಿಮಾತು ಹೇಳಿದರು.
ದೇವಸ್ಥಾನಗಳು ಮೂಢನಂಬಿಕೆಗಳಿಂದ ದೂರವಿದ್ದು, ಜನರಲ್ಲಿ ಭಕ್ತಿ-ಭಾವ ಹಾಗೂ ಸುಂದರ ಬದುಕಿಗೆ ಬೇಕಾದ ಸತ್ಸಂಗ ನೀಡುವಂತಾಗಲಿ ಎಂದು ಸ್ವಾಮೀಜಿ ಆಶಿಸಿದರು.
ಗ್ರಾ.ಪಂ. ಅಧ್ಯಕ್ಷ ಬಿ. ಉಮೇಶ್ ಅಧ್ಯಕ್ಷತೆ ವಹಿಸಿದ್ದರು. ಇನ್ ಸೈಟ್ನ ಸಂಸ್ಥಾಪಕ ಜಿ.ಬಿ. ವಿನಯ್ ಕುಮಾರ್ ಕಾಂಗ್ರೆಸ್ ಮುಖಂಡ, ಬಿಜೆಪಿ ಮುಖಂಡ ಚಂದ್ರಶೇಖರ್ ಪೂಜಾರ್, ಸಿ.ಎನ್. ಹುಲುಗೇಶ್, ಗ್ರಾ.ಪಂ. ಉಪಾಧ್ಯಕ್ಷೆ ನೇತ್ರಮ್ಮ ದೊಡ್ಡಬಾತಿ, ಪುರಾಣಿಕ ಕೆ. ರೇವಣಸಿದ್ದಪ್ಪ, ದೇವಸ್ಥಾನದ ಕುರಿಯರ್ ಪರಮೇಶ್ವರಪ್ಪ, ಬಿ. ಸಿದ್ದೇಶ್, ಕೆ. ಚನ್ನಪ್ಪ, ನಾಗೇನ ಹಳ್ಳಿಯ ಮಹಾಂತೇಶ್, ರಾಜನಹಳ್ಳಿ ಬೀರೇಶ್, ಕೊಮಾರನಹಳ್ಳಿ ಜಿ. ಮಂಜುನಾಥ್ ಪಟೇಲ್, ಮಲೇಬೆನ್ನೂರಿನ ಕೆ.ಪಿ. ಗಂಗಾಧರ್, ಪಿ.ಹೆಚ್. ಶಿವಕುಮಾರ್ ಹಾಗೂ ಇತರರು ಭಾಗವಹಿಸಿದ್ದರು.