ರಂಗಭೂಮಿಯ ಹಿರಿಯ ಕಲಾವಿದ ಹೆಚ್. ಮೆಹಬೂಬ್ ಅಲಿ ಇನ್ನಿಲ್ಲ

ರಂಗಭೂಮಿಯ ಹಿರಿಯ ಕಲಾವಿದ  ಹೆಚ್. ಮೆಹಬೂಬ್ ಅಲಿ ಇನ್ನಿಲ್ಲ

ದಾವಣಗೆರೆ,ಫೆ.13- ವೃತ್ತಿ ರಂಗಭೂಮಿಯ ಹಿರಿಯ ಕಲಾವಿದ ಹೆಚ್. ಮೆಹಬೂಬ್ ಅಲಿ ಅವರು ಇಂದು ಬೆಳಗಿನಜಾವ ನಿಧನರಾದರು. 

ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ ಸುಮಾರು 84 ವರ್ಷ ವಯಸ್ಸಾಗಿತ್ತು. ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ಇಂದು ಸಂಜೆ ನೆರವೇರಿತು.  ನಗರದ ಎಸ್‌ಓಜಿ ಕಾಲೋನಿ ಸಿ ವಿಭಾಗದಲ್ಲಿ ವಾಸವಾಗಿದ್ದ ಮೆಹಬೂಬ್ ಅಲಿ, ಕಳೆದ 6 ದಶಕಗಳಿಂದ ವೃತ್ತಿ ರಂಗಭೂಮಿಯಲ್ಲಿ ಶ್ರದ್ಧೆಯಿಂದ ವಿಭಿನ್ನ ಪಾತ್ರಗಳನ್ನು ನಿರ್ವಹಿಸಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದರು. 

ವೃತ್ತಿ ರಂಗಭೂಮಿಯಲ್ಲಿನ ಅವರ ಸೇವೆಯನ್ನು ಪರಿಗಣಿಸಿ ನಾಟಕ ಅಕಾಡೆಿಮಿಯು ಪ್ರಶಸ್ತಿ ನೀಡಿ ಗೌರವಿಸಿತ್ತು. ಹಲವಾರು ಸಾಮಾಜಿಕ ಸಂಘ-ಸಂಸ್ಥೆಗಳೂ ಸಹ ಅವರನ್ನು ಗೌರವಿಸಿದ್ದವು.

ಸಂತಾಪ : ಮೆಹಬೂಬ್ ಅಲಿ ಅವರ ನಿಧನಕ್ಕೆ ಕರ್ನಾಟಕ ರಾಜ್ಯ ರಂಗಭೂಮಿ ಕಲಾವಿದರ ಒಕ್ಕೂಟದ ಅಧ್ಯಕ್ಷ ಕೆ. ವೀರಯ್ಯ ಸ್ವಾಮಿ,  ಹಿರಿಯ ಕಲಾವಿದ – ಪತ್ರ ಕರ್ತ ಬಸವರಾಜ ಐರಣಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಕಲಾವಿದರಾದ ಸಾವಿತ್ರಮ್ಮ, ಶಶಿಕಲಾ, ಬಸವನಗೌಡ, ಶಂಭುಲಿಂಗಪ್ಪ, ಷರೀಫ್, ಜ್ಯೋತಿಕಲಾ ಮತ್ತು ಇತರರು ಶೋಕ ವ್ಯಕ್ತಪಡಿಸಿದ್ದಾರೆ.

ಶ್ರದ್ಧಾಂಜಲಿ ಸಭೆ : ರಂಗಭೂಮಿಯ ಧೀಮಂತ ಕಲಾವಿದರಾಗಿದ್ದ ಹೆಚ್. ಮೆಹಬೂಬ್ ಅಲಿ ಅವರನ್ನು ಕಳೆದುಕೊಂಡು ರಂಗಭೂಮಿ ಕ್ಷೇತ್ರ ನಿಜಕ್ಕೂ ಒಂದು ರಂಗ ನಕ್ಷತ್ರ ನನ್ನು ಕಳೆದುಕೊಂಡಂತಾಗಿದೆ ಎಂದು ರಂಗ ಸಂಘಟಕರು, ಬಯಲಾಟ ಅಕಾಡೆಮಿ ಮಾಜಿ ಸದಸ್ಯರು ಹಾಗೂ ಸ್ಪೂರ್ತಿ ಸಾಂಸ್ಕೃತಿಕ ಸೇವಾ ಸಂಘದ ಅಧ್ಯಕ್ಷರಾದ ಎನ್.ಎಸ್. ರಾಜು ವಿಷಾದ ವ್ಯಕ್ತಪಡಿಸಿದರು.

ಸ್ಫೂರ್ತಿ ಸಾಂಸ್ಕೃತಿಕ ಸೇವಾ ಸಂಘದ ಕಚೇರಿಯಲ್ಲಿ ಏರ್ಪಡಿಸಿದ್ದ  ಶ್ರದ್ಧಾಂಜಲಿ ಸಭೆಯಲ್ಲಿ ಪಾಲ್ಗೊಂಡು ಮಾತ ನಾಡಿದ ಅವರು, ಮೆಹಬೂಬ್ ಅಲಿ ಅವರು ಸುಮಾರು ವರ್ಷಗಳ ಕಾಲ ಹಲವಾರು ನಾಟಕಗಳ ಮೂಲಕ ನಮ್ಮನ್ನು ರಂಜಿಸಿದ್ದರು ಎಂದು ಕಂಬನಿ ಮಿಡಿದರು.

ಕಲಾವಿದ ಖಾದರ್ ಪಿ. ಮಾತನಾಡಿ, ಮೆಹಬೂಬ್ ಅಲಿ ಅವರು ಹಲವಾರು ನಾಟಕ ಕಂಪನಿಗಳಲ್ಲಿ ಭಿನ್ನ ವಿಭಿನ್ನ ಪಾತ್ರಗಳಲ್ಲಿ ಅಭಿನಯಿಸಿದ್ದರು ಎಂದು ಹೇಳಿದರು. 

ಪಿ.ಜಿ. ಪರಮೇಶ್ವರಪ್ಪ, ಮಾರ್ತಾಂಡಪ್ಪ, ಪಿ ತಿಪ್ಪೇಸ್ವಾಮಿ, ವಿಠೋಬರಾವ್ ನಲ್ವಡೆ, ಎ. ಸೂರೆಗೌಡ್ರು ಬಿ. ಕೊಟ್ರೇಶ್, ನೀರ್ಥಡಿ ಬಸವರಾಜ್, ಎಂ ಎಸ್ ಶಿವಕುಮಾರಸ್ವಾಮಿ, ಪಿ. ಹನುಮಂತಾಚಾರಿ, ಮೂಗಬಸಪ್ಪ ಮಡ್ರಳ್ಳಿ,   ಮತ್ತಿತರರು ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿದ್ದರು.

error: Content is protected !!