ಕಡೇನಂದಿಹಳ್ಳಿ : 36 ಅಡಿ ಎತ್ತರದ ಜಗದ್ಗುರು ರೇಣುಕಾಚಾರ್ಯರ ಪುತ್ಥಳಿ ಲೋಕಾರ್ಪಣೆ

ಕಡೇನಂದಿಹಳ್ಳಿ : 36 ಅಡಿ ಎತ್ತರದ ಜಗದ್ಗುರು ರೇಣುಕಾಚಾರ್ಯರ ಪುತ್ಥಳಿ ಲೋಕಾರ್ಪಣೆ

ಶಿಕಾರಿಪುರ, ಫೆ. 13 – ಜ್ಞಾನ ಕ್ರಿಯಾತ್ಮಕವಾದ ಧರ್ಮ ಪಾಲನೆಯಿಂದ ಜಗದಲ್ಲಿ ಶಾಂತಿ ನೆಲೆಸಲು ಸಾಧ್ಯ. ಅಂತರಂಗ ಮತ್ತು ಬಹಿರಂಗ ಪರಿಶುದ್ಧಗೊಳಿಸುವ ಶಕ್ತಿ ಶ್ರೀ ಗುರುವಿಗೆ ಇದೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ವಿಚಾರ ಧಾರೆ ಸರ್ವರಿಗೂ ದಾರಿದೀಪ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ತಾಲ್ಲೂಕಿನ ಕಡೇನಂದಿಹಳ್ಳಿ ಗ್ರಾಮದ ಶ್ರೀ ಗುರು ರೇವಣಸಿದ್ಧೇಶ್ವರ ಪುಣ್ಯಾಶ್ರಮದಲ್ಲಿ ಇಂದು ಜರುಗಿದ 36 ಅಡಿ ಎತ್ತರದ ಶ್ರೀ ಜಗದ್ಗುರು ರೇಣುಕಾಚಾರ್ಯರ ಪುತ್ಥಳಿ ಅನಾವರಣ ಮಹಾಮಸ್ತಕಾಭಿಷೇಕ ಪುಷ್ಪಾರ್ಚನೆ ನೆರವೇರಿಸಿದ ನಂತರ ಜರುಗಿದ ಧರ್ಮ ಸಂಸ್ಕೃತಿ ಪುನಶ್ಚೇತನ  ಸಮಾರಂಭದ ಸಾನ್ನಿಧ್ಯ ವಹಿಸಿ ಜಗದ್ಗುರುಗಳು ಆಶೀರ್ವಚನ ನೀಡಿದರು.

ಸಂಸ್ಕಾರ, ಸಂಸ್ಕೃತಿಗಳ ಮೂಲಕ ಅಂಗ ಅವಗುಣಗಳನ್ನು ದೂರ ಮಾಡಿ ಲಿಂಗಗುಣ ಬೆಳೆಸಲು ಶ್ರಮಿಸಿದವರು ರೇಣುಕಾಚಾರ್ಯರು. ಜೀವಾತ್ಮ ಪರಮಾತ್ಮನಾಗುವ ಅಂಗ ಲಿಂಗವಾಗುವ ಭವಿ ಭಕ್ತನಾಗುವ ಸಾಧನಾ ಮಾರ್ಗವನ್ನು ಬೋಧಿಸಿ ಜೀವನ ಉತ್ಕರ್ಷತೆಗೆ ಕಾರಣರಾದವರು ರೇಣುಕಾಚಾರ್ಯರು. ಗಂಡು-ಹೆಣ್ಣು, ಉಚ್ಛ-ನೀಚ ಮತ್ತು ಬಡವ-ಬಲ್ಲಿದ ಎನ್ನದೇ ಎಲ್ಲರ ಶ್ರೇಯಸ್ಸಿಗಾಗಿ ಅವರು ಶ್ರಮಿಸಿದ್ದನ್ನು ಮರೆಯಲಾಗದು. ಭೌತಿಕ ಬದುಕಿಗೆ ಸಂಪತ್ತಷ್ಟೇ ಮುಖ್ಯವಲ್ಲ. ಅದರೊಂದಿಗೆ ಶಿವಜ್ಞಾನದ ಅರಿವು ಮೂಡಿಸುವುದು ಮುಖ್ಯವೆಂದು ಆರೋಗ್ಯ ಪೂರ್ಣ ಸಮಾಜಕ್ಕೆ ಶ್ರಮಿಸಿದ ಕೀರ್ತಿ ಶ್ರೀ ಜಗದ್ಗುರು ರೇಣುಕಾಚಾರ್ಯರಿಗೆ ಸಲ್ಲುತ್ತದೆ. ಇಂತಹ ಭವ್ಯ ಸುಂದರ ಶ್ರೀ ಜಗದ್ಗುರು ರೇಣುಕಾಚಾರ್ಯರ ಪುತ್ಥಳಿ ನಿರ್ಮಿಸಿ ಲೋಕಾರ್ಪಣೆಗೈದ ಶ್ರೀ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು ಮಾಡಿದ ಸತ್ಕಾರ್ಯ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆಂದು ವರ್ಷ ವ್ಯಕ್ತಪಡಿಸಿ, ಶ್ರೀಗಳವರಿಗೆ ‘ಶಿವ ಪೂಜಾ ತಪೋರತ್ನ’ ಪ್ರಶಸ್ತಿ, ಚಿನ್ನದುಂಗುರ ಮತ್ತು ರೇಷ್ಮೆ ಮಡಿ ಹೊದಿಸಿ ಫಲ-ಪುಷ್ಪವಿತ್ತು ಜಗದ್ಗುರುಗಳು ಶುಭ ಹಾರೈಸಿದರು.

ಇದೇ ಸಂದರ್ಭದಲ್ಲಿ ಸಂಸದ ಬಿ.ವೈ. ರಾಘವೇಂದ್ರ ಅವರಿಗೆ `ಶ್ರೀ ರಂಭಾಪುರಿ ಜಗದ್ಗುರು ರೇವಣಸಿದ್ಧೇಶ್ವರ ರಾಷ್ಟ್ರೀಯ ಪ್ರಶಸ್ತಿ’ ಪ್ರದಾನ ಮಾಡಿ ಶುಭ ಹಾರೈಸಿದರು. ಪ್ರಶಸ್ತಿ ಸ್ವೀಕರಿಸಿದ ಬಿ.ವೈ.ರಾಘವೇಂದ್ರ ಕೃತಜ್ಞತಾ ಪೂರ್ವಕ ಮಾತುಗಳನ್ನಾಡಿದರು. 

ಕಾರ್ಕಳದ ಶಿಲ್ಪಿ ಕೃಷ್ಣಾ ಆಚಾರ್ಯ, ಶಿವಮೊಗ್ಗ ಶಿಲ್ಪಿ ಜೀವನ್ ಕಲಾ ಸನ್ನಿಧಿ, ಶಿಕಾರಿಪುರ ಪ್ರಥಮ ದರ್ಜೆ ಗುತ್ತಿಗೆದಾರ ದೇವೇಂದ್ರಪ್ಪ ಇವರಿಗೆ ಪ್ರಶಸ್ತಿ ಮತ್ತು ಗುರುರಕ್ಷೆ ನೀಡಿ, ಶ್ರೀ ರಂಭಾಪುರಿ ಜಗದ್ಗುರುಗಳು ಶುಭ ಹಾರೈಸಿದರು. 

ಬಿಜೆಪಿ ಧುರೀಣ ಕೆ.ಎಸ್. ಗುರುಮೂರ್ತಿ ಮತ್ತು ಹೆಚ್.ಬಿ. ಬಳಿಗಾರ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ನೇತೃತ್ವ ವಹಿಸಿದ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು. 

ಈ ಸಮಾರಂಭದಲ್ಲಿ ಕನ್ನೂರು-ಸಿಂಧನೂರು ಸೋಮನಾಥ ಶ್ರೀ, ಚನ್ನಗಿರಿ ಕೇದಾರ ಶಿವಶಾಂತವೀರ ಶ್ರೀ, ಹಾರನಹಳ್ಳಿ ಶಿವಯೋಗಿ ಶ್ರೀ, ಕಾರ್ಜುವಳ್ಳಿ ಸದಾಶಿವ ಶ್ರೀ, ಸಂಗೊಳ್ಳಿ ಗುರುಲಿಂಗ ಶ್ರೀಗಳು, ಕಡೆನಂದಿಹಳ್ಳಿ ವೀರಭದ್ರ ಶ್ರೀಗಳು ಸೇರಿದಂತೆ ಹಲವಾರು ಮಠಾಧೀಶರು ಉಪಸ್ಥಿತರಿದ್ದರು.

ಶಿಕ್ಷಕ ನಾಗರಾಜ ಹುಲ್ಲಿನಕೊಪ್ಪ ಸ್ವಾಗತಿಸಿದರು. ಸವಣೂರಿನ ಡಾ|| ಗುರುಪಾದಯ್ಯ ಸಾಲಿಮಠ ನಿರೂಪಿಸಿದರು. ಶಾಂತಾ ಅನಂದ ಇವರಿಂದ ಪ್ರಾರ್ಥನೆ ನಡೆಯಿತು.  

error: Content is protected !!