ದಾವಣಗೆರೆ, ಫೆ.12- ಜಿಎಸ್ಟಿ, ತೆರಿಗೆ ಹಣ, ಬರ ಪರಿಹಾರ ಸೇರಿದಂತೆ ವಿವಿಧ ಅನುದಾನಗಳನ್ನು ರಾಜ್ಯಗಳಿಗೆ ಹಂಚಿಕೆ ಮಾಡುವ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಎಸಗುತ್ತಿರುವ ಅನ್ಯಾಯ ಮತ್ತು ತಾರತಾಮ್ಯ ನೀತಿಯನ್ನು ಖಂಡಿಸಿ, ನಗರದ ಸಂಸದ ಜಿ.ಎಂ. ಸಿದ್ದೇಶ್ವರ ಅವರ ಕಚೇರಿ ಮುಂಭಾಗ ಇಂದು ಸಿಪಿಐ ಜಿಲ್ಲಾ ಮಂಡಳಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಕಳೆದ 4 ವರ್ಷಗಳಿಂದ ರಾಜ್ಯಗಳಿಗೆ ಲಭಿಸಬೇಕಾದ ತೆರಿಗೆ ಹಂಚಿಕೆಯಲ್ಲಿ ಕೇಂದ್ರ ಸರ್ಕಾರ ಕರ್ನಾಟಕ ರಾಜ್ಯಕ್ಕೆ ಅನ್ಯಾಯ ಎಸಗಿದ್ದು, ಸುಮಾರು 45 ಸಾವಿರ ಕೋಟಿ ನಷ್ಟವಾಗಿದೆ ಎಂದು ರಾಜ್ಯದ ಮುಖ್ಯಮಂತ್ರಿಗಳೇ ಅಂಕಿ-ಅಂಶಗಳನ್ನು ಬಹಿರಂಗಪಡಿಸಿ ದ್ದಾರೆ. ಇದರೊಂದಿಗೆ ರಾಜ್ಯದ ಬರ ಪರಿಹಾರದ ಅನುದಾನವನ್ನು ಬಿಡುಗಡೆಗೊಳಿಸದೇ ಇರುವುದು ರಾಜ್ಯಕ್ಕೆ ಮಾಡಿರುವ ಮಹಾ ಅನ್ಯಾಯವೇ ಆಗಿದೆ. ರಾಜ್ಯದ ಪಾಲಿನ ತೆರಿಗೆ ಹಣ ಸೇರಿದಂತೆ ನೆಲ, ಜಲ, ಭಾಷೆಯಂತಹ ರಾಜ್ಯದ ಅಸ್ಮಿತೆಯ ಪ್ರಶ್ನೆಗಳು ಎದುರಾದಾಗ, ರಾಜ್ಯದ ಪರ ಧ್ವನಿ ಎತ್ತದೇ ಮೌನ ತಾಳಿರುವುದು ಸಂಸದರ ನಿರ್ಲಕ್ಷ್ಯತನ ಎಂದು ಆಕ್ರೋಶ ವ್ಯಕ್ತಪಡಿಸಲಾಯಿತು.
ಆವರಗೆರೆ ಚಂದ್ರು, ಹೆಚ್.ಜಿ. ಉಮೇಶ್, ಆವರಗೆರೆ ವಾಸು, ಆನಂದರಾಜು, ಸಿ. ರಮೇಶ್ ಪಿ.ಷಣ್ಮುಖ ಸ್ವಾಮಿ, ಎ.ಬಿ. ಸಾವಿತ್ರಮ್ಮ, ಸಿ. ರಮೇಶ್, ಕೃಷ್ಣಪ್ಪ, ಹೆಚ್.ಪಿ. ಉಮಾಪತಿ, ನಾಗಮ್ಮ, ಭಾಗ್ಯ ಇತರರು ಪ್ರತಿಭಟನೆಯಲ್ಲಿದ್ದರು.