ದಾವಣಗೆರೆ, ಫೆ. 6 – ಬಹುಗ್ರಾಮ ಕುಡಿಯುವ ನೀರು ಯೋಜನೆ, ಜಾತ್ರಾ ಮಹೋತ್ಸವದ ಉದ್ದೇಶದಿಂದ ಭದ್ರಾ ಜಲಾಶಯದಿಂದ ತುಂಗಭದ್ರಾ ನದಿಗೆ ನೀರು ಹರಿಸಲಾಗುತ್ತಿದ್ದು, ಸಾರ್ವಜನಿಕರು ನದಿ ದಂಡೆಗೆ ಬಾರದಂತೆ, ದಾಟದಂತೆ ಎಚ್ಚರಿಕೆ ವಹಿಸಬೇಕೆಂದು ಭದ್ರಾ ಜಲಾಶಯದ ನೀರಾವರಿ ಸಲಹಾ ಸಮಿತಿ ಸದಸ್ಯ ಕಾರ್ಯದರ್ಶಿ ಹಾಗೂ ಅಧೀಕ್ಷಕ ಇಂಜಿನಿಯರ್ ತಿಳಿಸಿದ್ದಾರೆ.
ನದಿಗೆ ಫೆ. 5 ರಿಂದ 10ರ ವರೆಗೆ ಪ್ರತಿದಿನ 2 ಸಾವಿರ ಕ್ಯೂಸೆಕ್ಸ್ ಮತ್ತು ಫೆ.18 ರಿಂದ 23 ರ ವರೆಗೆ ಪ್ರತಿದಿನ 500 ಕ್ಯೂಸೆಕ್ಸ್ ನೀರನ್ನು ಹರಿಸಲಾಗುತ್ತದೆ. ಹಾವೇರಿ, ಗದಗ ಮತ್ತು ಬೆಟಗೇರಿ, ರಾಣೇಬೆನ್ನೂರು, ಬ್ಯಾಡಗಿ, ಕೂಡ್ಲಿಗಿ, ಕೊಟ್ಟೂರು, ಹಗರಿಬೊಮ್ಮನಹಳ್ಳಿ ಮತ್ತು ಹಿರೇಕೆರೂರು ಪಟ್ಟಣಗಳಿಗೆ ಅಲ್ಲದೇ ನದಿಯ ಪಕ್ಕದಲ್ಲಿ ಬರುವ ಗ್ರಾಮಗಳಿಗೆ ಹೂವಿನಹಡಗಲಿ ತಾಲ್ಲೂಕಿನ ಮೈಲಾರ ಗ್ರಾಮದ ಶ್ರೀ ಮೈಲಾರ ಲಿಂಗೇಶ್ವರ ಸ್ವಾಮಿಯ ವಾರ್ಷಿಕ ಕಾರಣಿಕೋತ್ಸವದ ಪ್ರಯುಕ್ತ ಭದ್ರಾ ಜಲಾಶಯದಿಂದ ತುಂಗಭದ್ರಾ ನದಿಗೆ ಕುಡಿಯುವ ನೀರಿಗಾಗಿ ನೀರು ಹರಿಸಲಾಗುವುದು. ಆದರೆ ಅನಧಿಕೃತ ಪಂಪ್ಸೆಟ್ಗಳ ಮೂಲಕ ನೀರೆತ್ತುವುದನ್ನು ನಿಷೇಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.