ಒತ್ತಡ ಮುಕ್ತ ಜೀವನಕ್ಕೆ ಕ್ರೀಡೆ ಸಹಕಾರಿ : ಡಾ|| ಪ್ರಭಾ ಮಲ್ಲಿಕಾರ್ಜುನ್
ದಾವಣಗೆರೆ, ಫೆ.5- ಪ್ರತಿಯೊಬ್ಬರೂ ಯಾವುದಾದರೂ ಒಂದು ಕ್ರೀಡೆಯಲ್ಲಿ ಭಾಗವಹಿಸುವ ಮೂಲಕ ತಮ್ಮ ಒತ್ತಡ ಕಳೆದುಕೊಳ್ಳಬೇಕು ಎಂದು ಬಾಪೂಜಿ ವಿದ್ಯಾಸಂಸ್ಥೆ ಆಡಳಿತ ಮಂಡಳಿ ಸದಸ್ಯರು ಹಾಗೂ ಎಸ್.ಎಸ್ ಲೈಫ್ ಕೇರ್ ಟ್ರಸ್ಟ್ನ ಟ್ರಸ್ಟಿ ಡಾ|| ಪ್ರಭಾ ಮಲ್ಲಿಕಾರ್ಜುನ್ ಅವರು ಕರೆ ನೀಡಿದರು.
ಅವರಿಂದು ದಾವಣಗೆರೆ ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ವತಿಯಿಂದ ನಗರದ ಲೂರ್ಡ್ಸ್ ಬಾಯ್ಸ್ ಸ್ಕೂಲ್ ಆವರಣದಲ್ಲಿ ಹಮ್ಮಿಕೊಂಡಿರುವ ರಾಜ್ಯ ಮಟ್ಟದ ಹೊನಲು ಬೆಳಕಿನ ಮಹಿಳಾ ಫುಟ್ಬಾಲ್ ಲೀಗ್ ಪಂದ್ಯಾವಳಿ ಮುಕ್ತಾಯ ಸಮಾರಂಭದಲ್ಲಿ ಭಾಗವಹಿಸಿ, ಬಹುಮಾನ ವಿತರಿಸಿ ಮಾತನಾಡಿದರು.
ಇಂದು ಬಹಳಷ್ಟು ಜನರು ಒತ್ತಡ ಜೀವನದಲ್ಲಿ ಜೀವಿ ಸುತ್ತಿದ್ದು, ಇಂತಹ ಒತ್ತಡದ ಜೀವನವನ್ನು ಸಮರ್ಪಕವಾಗಿ ನಿರ್ವಹಿಸಲು ಕ್ರೀಡೆ ಸಹಕಾರಿ ಆಗಲಿದೆ ಎಂದರು.
ಕ್ರೀಡಾಕೂಟಗಳಲ್ಲಿ ಭಾಗವಹಿಸುವ ಪ್ರತಿಯೊಬ್ಬರೂ ಆರೋಗ್ಯವಂತ ಜೀವನ ನಡೆಸಬಹುದು. ಜೊತೆಗೆ ದುಶ್ಚಟಗ ಳಿಂದ ದೂರವಿರಲು ಅನುಕೂಲವಾಗಲಿದೆ ಎಂದು ತಿಳಿಸಿದರು.
ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಅಧ್ಯಕ್ಷ
ದಿನೇಶ್ ಕೆ.ಶೆಟ್ಟಿ ಮಾತನಾಡಿ, ದಾವಣಗೆರೆಯಲ್ಲಿ ರಾಜ್ಯಮಟ್ಟದ ಪಂದ್ಯಾವಳಿ ನಡೆದಿರುವುದು ದಾವಣಗೆರೆಗೆ ಹೆಮ್ಮೆಯ ವಿಚಾರ.
ಮುಂದಿನ ದಿನಗಳಲ್ಲಿ ಶಾಸಕ ಶಾಮನೂರು ಶಿವಶಂಕರಪ್ಪ ಮತ್ತು ಎಸ್.ಎಸ್.ಮಲ್ಲಿಕಾರ್ಜುನ್ ಅವರ ಸಹಕಾರದೊಂದಿಗೆ ರಾಷ್ಟ್ರ ಮಟ್ಟದ ಕ್ರೀಡಾಕೂಟವನ್ನು ಆಯೋಜಿಸಲಾಗುವುದು ಎಂದರು. ಈ ಕ್ರೀಡಾಕೂಟದಲ್ಲಿ 15 ವರ್ಷದ ಒಳಗಿನ ಹಳಿಯಾಳ ಫುಟ್ಬಾಲ್ ಕ್ಲಬ್ ಪ್ರಥಮ ಸ್ಥಾನ, ದಿ ಯುನೈಟೆಡ್ ಫುಟ್ಬಾಲ್ ಕ್ಲಬ್ ಹಾವೇರಿ ಇವರು ದ್ವಿತೀಯ ಸ್ಥಾನ ಪಡೆದರು. ಕವಿತಾ ಬೆಸ್ಟ್ ಗೋಲ್ ಕೀಪರ್, ಅರ್ಫಿನಾ ಬೆಸ್ಟ್ ಪ್ಲೇಯರ್, ಅಂಜಲಿ ಅತಿ ಹೆಚ್ಚು ಗೋಲ್ಗಳನ್ನು ಹೊಡೆದ ಪ್ರಶಸ್ತಿಗೆ ಭಾಜನರಾದರು. 13 ವರ್ಷದೊಳಗಿನ ಪಂದ್ಯಾವಳಿಯಲ್ಲಿ ಸೆಂಟ್ ಜವೇರಿಯಾ ಫುಟ್ಬಾಲ್ ಕ್ಲಬ್ ಪ್ರಥಮ ಸ್ಥಾನ, ದಿ ಯುನೈಟೆಡ್ ಫುಟ್ಬಾಲ್ ಕ್ಲಬ್ ರಾಣೇಬೆನ್ನೂರು, ಇವರು ದ್ವಿತೀಯ ಸ್ಥಾನ ಪಡೆದರು. ಚಿನ್ಮಯ್ ಬೆಸ್ಟ್ ಗೋಲ್ ಕೀಪರ್, ವೀಕ್ಷಾ ಬೆಸ್ಟ್ ಪ್ಲೇಯರ್, ಕವಿತಾ ಅತಿ ಹೆಚ್ಚು ಗೋಲ್ಗಳನ್ನು ಹೊಡೆದ ಪ್ರಶಸ್ತಿಗೆ ಭಾಜನರಾದರು.
ಕರ್ನಾಟಕ ರಾಜ್ಯ ಫುಟ್ಬಾಲ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಎಂ.ಕುಮಾರ್, ಜಂಟಿ ಕಾರ್ಯದರ್ಶಿ ಅಸ್ಲಾಂ ಖಾನ್, ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ನ ಪ್ರಧಾನ ಕಾರ್ಯದರ್ಶಿ ಅಲ್ಲಾವಲ್ಲಿ ಮುಜಾಹಿದ್ ಖಾನ್, ಮಹಮದ್ ರಫೀಕ್, ಎಸ್.ಕೆ.ಚಂದ್ರಶೇಖರ್, ಮಹಮದ್ ಮುಜೀತಪ್, ಸೈಯದ್ ಖಾಲಿದ್, ಜಾನ್ ಫರ್ನಾಂಡಿಸ್, ಅಶ್ರಫ್ ಅಲಿ, ಬಿ.ಎಸ್.ಭಕ್ಷಿ, ಅಹ್ಮದ್ ರಜಾ, ಸಮೀರ್, ತಬ್ರೇಜ್, ತನ್ವೀರ್ ಮತ್ತಿತರರಿದ್ದರು.