ಹರಪನಹಳ್ಳಿ, ಫೆ.4- ಮಂಡ್ಯ ಜಿಲ್ಲಾ ಕುರುಬರ ವಿದ್ಯಾರ್ಥಿ ನಿಲಯದ ಮೇಲೆ ಕಲ್ಲು ತೂರಾಟ ನಡೆಸಿ, ಶಾಂತಿ ಕದಡಿದ ಕಿಡಿಗೇಡಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ, ತಾಲ್ಲೂಕು ಕುರುಬ ಸಮಾಜದ ಮುಖಂಡರು ತಹಶೀಲ್ದಾರ್ಗೆ ಮನವಿ ಸಲ್ಲಿಸಿದರು.
ಕುರುಬ ಸಮಾಜದ ತಾಲ್ಲೂಕು ಅಧ್ಯಕ್ಷ ಬಿ. ಗೋಣಿಬಸಪ್ಪ ಮಾತನಾಡಿ, ಈಚೆಗೆ ಮಂಡ್ಯ ಜಿಲ್ಲೆ ಕೆರಗೋಡು ಗ್ರಾಮದ ಹನುಮ ಧ್ವಜ ತೆರವು ವಿರೋಧಿಸಿ, ಪ್ರತಿಭಟನೆ ಮಾಡುತ್ತಿದ್ದ ವೇಳೆ ಮಂಡ್ಯ ಜಿಲ್ಲಾ ಕುರುಬರ ಸಂಘದ ವಿದ್ಯಾರ್ಥಿ ನಿಲಯದ ಮೇಲೆ ಕೆಲ ಕಿಡಿಗೇಡಿಗಳು ಕಲ್ಲು ತೂರಾಟ ಮಾಡಿ, ಕಟ್ಟಡದ ಕಿಟಕಿಗಳ ಗಾಜುಗಳನ್ನು ಧ್ವಂಸಗೊಳಿಸಿದ್ದಾರೆ, ಇಂತಹ ದುಷ್ಕೃತ್ಯ ಎಸಗಿದ ದುಷ್ಕರ್ಮಿಗಳು ಯಾರೇ ಆಗಿದ್ದರೂ ಸರ್ಕಾರ ಅಂತಹವರನ್ನು ಪತ್ತೆ ಮಾಡಿ, ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಒತ್ತಾಯಿಸಿದರು.
ಕುರುಬರ ಹಾಸ್ಟೆಲ್ ಮೇಲಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಕನಕದಾಸರ ಭಾವಚಿತ್ರಕ್ಕೂ ಕಿಡಿಗೇಡಿಗಳು ಅವಮಾನಿಸಿದ್ದಾರೆ. ಸ್ಥಳದಲ್ಲಿದ್ದ ವಾಹನಗಳಿಗೆ ಬೆಂಕಿ ಹಚ್ಚುವ ಮೂಲಕ ವಿವಾದವನ್ನು ರಾಜಕೀಯ ದುರುದ್ಧೇಶಕ್ಕೆ ಬಳಸಲು ಪ್ರಯತ್ನಿಸಿದ್ದಾರೆ. ಇಂತಹ ಕೃತ್ಯಗಳಿಂದ ಯುವಕರನ್ನು ದಾರಿ ತಪ್ಪಿಸುವ ಕೆಲಸ ಮೊದಲು ನಿಲ್ಲಬೇಕು. ಈ ಕೃತ್ಯಕ್ಕೆ ಪ್ರಚೋದನೆ ನೀಡಿದ ಮತ್ತು ಕೃತ್ಯ ಎಸಗಿದ ಸಮಾಜಘಾತುಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಪ್ರದೇಶ ಕುರುಬ ಸಮಾಜದ ರಾಜ್ಯ ಉಪಾಧ್ಯಕ್ಷ ಹೆಚ್.ಬಿ.ಪರಶುರಾಮಪ್ಪ, ಯುವ ಘಟಕದ ಅಧ್ಯಕ್ಷ ಬಸವರಾಜ್ ಹುಲಿಯಪ್ಪನವರ್, ಕಾರ್ಯದರ್ಶಿ ಪರಶುರಾಮ್, ಅರುಣ್ ಕುಮಾರ್, ಪುರಸಭೆ ಸದಸ್ಯರಾದ ಉದ್ದಾರ ಗಣೇಶ, ಭರತೇಶ್, ಮುಖಂಡರಾದ ಹೆಚ್.ಪರಶುರಾಮ್, ಸಣ್ಣ ವೀರಪ್ಪ, ನಾಗರಾಜ್ ಚಿರಸ್ತಳ್ಳಿ, ಮೈಲಜ್ಜ, ಇಟ್ಟಿಗುಡಿ ರಮೇಶ್, ಭರತ್ ಉದ್ಧಾರ್, ರಮೇಶ್ ಉದ್ಧಾರ್, ಅಭಿ, ಗೋಣಿ ಮಾಲತೇಶ್, ಪ್ರವೀಣ್ ಸೇರಿದಂತೆ ಇತರರು ಇದ್ದರು.