ಬಾಲಕಿಯ ಮೇಲೆ ಅತ್ಯಾಚಾರ: 20 ವರ್ಷ ಜೈಲು, ದಂಡ

ದಾವಣಗೆರೆ, ಫೆ. 4- ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪಿಗೆ 20 ವರ್ಷ ಜೈಲು ಶಿಕ್ಷೆ ಹಾಗೂ 25 ಸಾವಿರ ರೂ. ದಂಡ ವಿಧಿಸಿ ಇಲ್ಲಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ಎಫ್.ಟಿ.ಎಸ್.ಸಿ-1 ನ್ಯಾಯಾಲಯ ತೀರ್ಪು ನೀಡಿದೆ. ಹರಿಹರ ಟೌನ್ ಗಾಂಧಿ ನಗರದ ಮಕ್ಸೂದ್ (28) ಪಕ್ಕದ ಮನೆಯಲ್ಲಿದ್ದ ಅಪ್ರಾಪ್ತ ಬಾಲಕಿಗೆ ಚಾಕೋಲೇಟ್ ಆಸೆ ತೋರಿಸಿ ಅತ್ಯಾಚಾರ ಎಸಗಿದ್ದ. ಈ ಕುರಿತು 2020ರ ನವೆಂಬರ್ 14ರಂದು ಬಾಲಕಿಯ ತಂದೆ ದೂರು ದಾಖಲಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಹರಿಹರ ವೃತ್ತ ಸಿಪಿಐ ಎಂ.ಶಿವಪ್ರಸಾದ್ ತನಿಖೆ ಕೈಗೊಂಡು ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಎನ್. ಶ್ರೀಪಾದ್ ಅವರು  ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.  ಪಿರ್ಯಾದಿ ಪರ ಸರ್ಕಾರಿ ವಕೀಲರಾದ ಸುನಂದಾ ಮಡಿವಾಳರ ನ್ಯಾಯ ಮಂಡಿಸಿದ್ದರು.

error: Content is protected !!