ಮಾಯಕೊಂಡ : ಶ್ಯಾಗಲೆಯ ಕುವೆಂಪು ವಿದ್ಯಾಲಯದ ಕುವೆಂಪು ಕಲೋತ್ಸವ-2024 ಕಾರ್ಯಕ್ರಮದಲ್ಲಿ ಪುರುಷೋತ್ತಮಾನಂದ ಪುರಿ ಸ್ವಾಮೀಜಿ
ಮಾಯಕೊಂಡ, ಫೆ.4- ಭಾರತದ ಉಳಿವಿಗಾಗಿ ಪೋಷಕರು ಮಕ್ಕಳಿಗೆ ಶಿಕ್ಷಣದೊಂದಿಗೆ ಸಂಸ್ಕಾರ ಕಲಿಸಬೇಕು ಎಂದು ಭಗೀರಥ ಪೀಠಾಧ್ಯಕ್ಷರಾದ ಪುರುಷೋತ್ತಮಾನಂದ ಪುರಿ ಸ್ವಾಮೀಜಿ ಕರೆ ನೀಡಿದರು.
ಶ್ಯಾಗಲೆಯಲ್ಲಿ ನಡೆದ ಕುವೆಂಪು ವಿದ್ಯಾಲಯ ಹಮ್ಮಿಕೊಂಡ ಕುವೆಂಪು ಕಲೋತ್ಸವ 2024ರ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.
ಶಿಕ್ಷಣದ ಜತೆಗೆ ಮಾನವೀಯ, ಸಾಮಾಜಿಕ ಮೌಲ್ಯಪಡೆಯದಿದ್ದರೆ ಶಿಕ್ಷಣ ಸಾರ್ಥಕವಾಗದು. ನೈತಿಕ ಮೌಲ್ಯ ಮಕ್ಕಳಲ್ಲಿ ತುಂಬುವುದೇ
ಶಿಕ್ಷಣ. ಜಗತ್ತೇ ಭಾರತದತ್ತ ನೋಡುತ್ತಿದ್ದರೆ, ಭಾರತೀಯರೇ
ಪಾಶ್ಚಾತ್ಯ ಸಂಸ್ಕೃತಿಗೆ ಮಾರುಹೋಗುತ್ತಿರುವುದು ದುರಂತ. ಸಂಸ್ಕಾರ ಕಲಿಸದೇ ಬರೀ ಹಣದ ಹಿಂದೆ ಬೀಳುವುದನ್ನು ಕಲಿಸಿದ ಪೋಷಕರಿಗೆ ವೃದ್ದಾಶ್ರಮಗಳೇ ಗತಿಯಾಗುತ್ತವೆ. ಗುರುಕುಲ ಶಿಕ್ಷಣದಲ್ಲಿದ್ದ ಮೌಲ್ಯ ಮೆಕಾಲೆ ಶಿಕ್ಷಣದಲ್ಲಿ ಇಲ್ಲವಾಗಿದೆ. ಅಬ್ದುಲ್ ಕಲಾಂ, ಡಾ. ಬಿ.ಆರ್.ಅಂಬೇಡ್ಕರ್, ಸಾಲು ಮರದ ತಿಮ್ಮಕ್ಕನಂತವರು ಶ್ರದ್ದೆಯಿಂದ ದುಡಿದು ವಿಶ್ವದ ಗಮನ ಸೆಳೆದಿದ್ದಾರೆ.
ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಬಹಳ ಪ್ರತಿಭಾವಂತರಿದ್ದು, ಪ್ರೋತ್ಸಾಹ ಅತ್ಯಗತ್ಯ. ನಾವು ಪಡೆದ ಜ್ಞಾನವನ್ನು ಇತರರಿಗೆ ಹಂಚುವುದು ಧರ್ಮ ಎಂದು ಅವರು ಪ್ರತಿಪಾದಿಸಿದರು.
ಆರ್.ಎಸ್.ಎಸ್ ನ ವಿಭಾಗ ಪ್ರಚಾರ್ ಪ್ರಮುಖ್, ನವೀನ್, ಸುಬ್ರಮಣ್ಯ ಉಪನ್ಯಾಸ ನೀಡಿ, ಜಗತ್ತು ಭಾರತವನ್ನು ಗುರುತಿಸುವಂತಾಗಲು ಇಲ್ಲಿನ ಶಿಕ್ಷಣ ಕಾರಣ. ಭಾರತ ವಿಶ್ವದ ಮೂರನೇ ಆರ್ಥಿಕ ಮತ್ತು ಸೇನಾ ಶಕ್ತಿಯಾಗಿ ಹೊರಹೊಮ್ಮಿದೆ. ಕುವೆಂಪು ಆದರ್ಶಗಳ ಪಾಲನೆಯಿಂದ ಶಿಕ್ಷಣ ಸಂಸ್ಥೆ ಬೆಳೆಯಲಿ ಎಂದು ಹಾರೈಸಿದರು.
ಹನುಮಂತಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶೈಕ್ಷಣಿಕ ಸಾಧನೆ ತೋರಿದ ಪ್ರತಿಭೆಗಳನ್ನು ಪುರಸ್ಕರಿಸಲಾಯಿತು. ದಾವಣಗೆರೆ ವಿಶ್ವ ವಿದ್ಯಾನಿಲಯದ ಪ್ರಾಧ್ಯಾಪಕ, ಹಣಕಾಸು ಅಧಿಕಾರಿ ಶಶಿಧರ್ ಮತ್ತು ಕೈಗಾರಿಕೋದ್ಯಮಿ ಶಿವಲಿಂಗಪ್ಪ ಕಾಗಿನೆಲ್ಲಿ ಅವರನ್ನು ಸನ್ಮಾನಿಸಲಾಯಿತು.
ದಾವಣಗೆರೆ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಡಾ.ಅಶೋಕ ಕುಮಾರ್ ಪಾಳೇದ ಪ್ರಾಸ್ತಾವಿಕ ಮಾತನಾಡಿದರು. ಸಂಸ್ಥೆಯ ಕಾರ್ಯದರ್ಶಿ ಬಿ.ಸಿ.ಸಿದ್ದಪ್ಪ ಸ್ವಾಗತಿಸಿದರು.
ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶೋಭಾ, ಮಾಜಿ ಅಧ್ಯಕ್ಷ ಮೂರ್ತೆಪ್ಪ, ತಾಲ್ಲೂಕು ಪಂಚಾಯತಿ ಮಾಜಿ ಸದಸ್ಯ ಪರಮೇಶ್ವರಪ್ಪ, ಮುಖಂಡರಾದ ಕಂದಗಲ್ಲು ಮಲ್ಲಿಕಾರ್ಜುನ, ಶ್ಯಾಗಲೆ ನಂಜಪ್ಪ, ಬಾಡಾ ಸುರೇಶ್, ಮಳಲಕೆರೆ ಕೃಷ್ಣಮೂರ್ತಿ, ಗುಡಾಳು ಸುರೇಶ್, ತೋಟಗಾರಿಕೆ ಅಧಿಕಾರಿ ರಾಮಕೃಷ್ಣ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.