ದಾವಣಗೆರೆ, ಫೆ. 2- ಕರ್ನಾಟಕ ರಾಜ್ಯ ಅಂಗವಿಕಲ ಕ್ರೀಡಾ ಸಂಸ್ಥೆ ಬೆಂಗಳೂರು ಮತ್ತು ಕರ್ನಾಟಕ ಪ್ಯಾರಾ ಬ್ಯಾಡ್ಮಿಂಟನ್ ಅಸೋಸಿಯೇಷನ್ ಇವರ ಸಂಯುಕ್ತಾ ಶ್ರಯದಲ್ಲಿ ದಾಣಗೆರೆ ಜಿಲ್ಲಾ ಪ್ಯಾರಾ ಬ್ಯಾಡ್ಮಿಂಟನ್ ಸಂಸ್ಥೆ ಯವರು ನಾಡಿದ್ದು ದಿನಾಂಕ 4 ರ ಭಾನುವಾರ ನಗರದ ನೇತಾಜಿ ಒಳಾಂಗಣ ಕ್ರೀಡಾಂಗಣದಲ್ಲಿ ಕರ್ನಾಟಕ ರಾಜ್ಯ ಪ್ಯಾರಾ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ ಎಂದು ಅಸೋಸಿಯೇಷನ್ ಅಧ್ಯಕ್ಷ ಡಾ. ಎ.ಎಂ. ಶಿವಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪಂದ್ಯಾವಳಿಯಲ್ಲಿ ವಿಜೇತರಾದವರನ್ನು ರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡಲಾಗುತ್ತದೆ. ಪಂದ್ಯಾವಳಿ ಬೆಂಗಳೂರನ್ನು ಹೊರತುಪಡಿಸಿ ಹೊರ ಜಿಲ್ಲೆಗಳಲ್ಲಿ ಮೊದಲ ಬಾರಿಗೆ ದಾವಣಗೆರೆಯಲ್ಲಿ ಆಯೋಜಿಸಲಾಗಿದೆ ಎಂದರು.
ಸುಮಾರು 80 ಕ್ಕೂ ಹೆಚ್ಚು ಆಟಗಾರರು ಭಾಗವಹಿಸಲಿದ್ದು, ಪಂದ್ಯಾವಳಿಯಲ್ಲಿ ಆರು ವಿಭಾಗಗಳಾಗಿ ಪುರುಷ ಮತ್ತು ಮಹಿಳೆಯರ ಸಿಂಗಲ್ಸ್ ಹಾಗೂ ಡಬಲ್ಸ್ ಪಂದ್ಯಾವಳಿಗಳು ನಡೆಯಲಿವೆ ಎಂದು ಮಾಹಿತಿ ನೀಡಿದರು.
ಭಾಗವಹಿಸುವ ಆಟಗಾರರಿಗೆ ಬೆಳಿಗ್ಗೆ ಉಪಹಾರ, ಮಧ್ಯಾಹ್ನ ಭೋಜನ, ಸಂಜೆ ಲಘು ಉಪಹಾರವನ್ನು ವ್ಯವಸ್ಥೆ ಮಾಡಲಾಗಿದೆ. ಪಂದ್ಯಾವಳಿಯ ಉದ್ಘಾಟನೆಯನ್ನು ಡಾ. ಶಾಮನೂರು ಶಿವಶಂಕರಪ್ಪ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಯಾಗಿ ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ಆಗಮಿಸಲಿದ್ದಾರೆಂದರು.
ಸುದ್ದಿಗೋಷ್ಠಿಯಲ್ಲಿ ಅಸೋಸಿಯೇಷನ್ ಪದಾಧಿಕಾರಿಗಳಾದ ಇ. ದೇವೇಂದ್ರಪ್ಪ,
ಎಂ. ಮಣಿವಾಸಗಮ್, ಜಿ.ಬಿ. ಉಮೇಶ, ನಿರ್ದೇಶಕ ಬಿ. ತಿಪ್ಪೇಶ್ ಮತ್ತಿತರರು ಭಾಗವಹಿಸಿದ್ದರು.