ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರವಾಸದಿಂದ ಸಹಬಾಳ್ವೆಯ ಮನೋಭಾವ ಹೆಚ್ಚಾಗುತ್ತದೆ : ಬಿಇಓ ಎ.ಹನುಮಂತಪ್ಪ

ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರವಾಸದಿಂದ ಸಹಬಾಳ್ವೆಯ ಮನೋಭಾವ ಹೆಚ್ಚಾಗುತ್ತದೆ : ಬಿಇಓ ಎ.ಹನುಮಂತಪ್ಪ

ಹರಿಹರ, ಜ.30- ವಿದ್ಯಾರ್ಥಿಗಳು ಶೈಕ್ಷಣಿಕ ಪ್ರವಾಸ ಮಾಡುವುದರಿಂದ ಹೊಸ ಬಗೆಯ ಐತಿಹಾಸಿಕ ಮತ್ತು ಭೌಗೋಳಿಕ ಅಂಶಗಳನ್ನು ತಿಳಿಯುವುದರ ಜೊತೆಗೆ ಸಹಬಾಳ್ವೆಯ ಮನೋಭಾವ ಹೆಚ್ಚಾಗುತ್ತದೆ ಎಂದು ಬಿಇಓ ಎ. ಹನುಮಂತಪ್ಪ ಹೇಳಿದರು. 

ನಗರದ ಗುರುಭವನದಲ್ಲಿ ಶಿಕ್ಷಣ ಇಲಾಖೆ ಮತ್ತು ಪ್ರವಾಸೋದ್ಯಮ ಇಲಾಖೆ ವತಿಯಿಂದ ಎಸ್ಸಿ, ಎಸ್ಟಿ ಮತ್ತು ಒಬಿಸಿ 8, 9, 10ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ತಾಲ್ಲೂಕಿನ ವಿವಿಧ ಶಾಲೆಯ 101 ಮಕ್ಕಳ ಕರ್ನಾಟಕ ದರ್ಶನ ಶೈಕ್ಷಣಿಕ ಪ್ರವಾಸ ಕೈಗೊಂಡ ವಿದ್ಯಾರ್ಥಿಗಳಿಗೆ ಕಿಟ್ ವಿತರಣೆ ಮಾಡಿ, ಪ್ರವಾಸದ ಬಸ್‌ಗೆ ಚಾಲನೆ ನೀಡಿ ಅವರು ಮಾತನಾಡಿದರು. 

ಈಗಾಗಲೇ ತಾಲ್ಲೂಕಿನ ಹಲವಾರು ಶಾಲೆಯ ವಿದ್ಯಾರ್ಥಿಗಳು ಶೈಕ್ಷಣಿಕ ಪ್ರವಾಸ ಮಾಡಿದ್ದು, ಆ ಸಂದರ್ಭದಲ್ಲಿ ಕಡುಬಡತನದಲ್ಲಿ ಇರುವಂತಹ ವಿದ್ಯಾರ್ಥಿಗಳು ಪ್ರವಾಸಕ್ಕೆ ಹೋಗದೇ ಆರ್ಥಿಕ ಸಂಕಷ್ಟದಲ್ಲಿರುವಂತಹ ಮಕ್ಕಳಿಗೆ ತಾಲ್ಲೂಕಿನ 25 ಶಾಲೆಯಿಂದ ಸುಮಾರು 101 ವಿದ್ಯಾರ್ಥಿಗಳಿಗೆ ಪ್ರವಾಸೋದ್ಯಮ ಮತ್ತು ಶಿಕ್ಷಣ ಇಲಾಖೆಯ ವತಿಯಿಂದ ಉಚಿತವಾಗಿ ಪ್ರವಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಪ್ರವಾಸದ ವೇಳೆ ವಿದ್ಯಾರ್ಥಿಗಳು ಐತಿಹಾಸಿಕ ವಿಷಯಗಳ ಬಗ್ಗೆ ಮಾಹಿತಿ ಸಂಗ್ರಹಿಸಿದಾಗ ಅವರಿಗೆ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶ ಮಾಡಿಕೊಡುತ್ತದೆ. ಅದರಲ್ಲಿ ಯಾವ ವಿದ್ಯಾರ್ಥಿಗಳು ಚೆನ್ನಾಗಿ ಪ್ರಬಂಧವನ್ನು ಬರೆದಿರುತ್ತಾರೋ ಆ ವಿದ್ಯಾರ್ಥಿಗಳಿಗೆ ಪ್ರಥಮ, ದ್ವಿತೀಯ, ತೃತೀಯ ಶ್ರೇಣಿಯ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. 

ಪೋಷಕರು ಮಕ್ಕಳಿಗೆ ಬೆಲೆಬಾಳುವ ಆಭರಣ, ಹೆಚ್ಚು ಹಣ ಮತ್ತು ವಸ್ತುಗಳನ್ನು ಕೊಡಬಾರದು. ವಿದ್ಯಾರ್ಥಿಗಳು ಪ್ರವಾಸ ಸಮಯದಲ್ಲಿ  ಅನುಚಿತವಾಗಿ ವರ್ತನೆ ಮಾಡಬಾರದು, ನಗರಕ್ಕೆ ಕೆಟ್ಟ ಹೆಸರು ಬರದಂತೆ ಎಚ್ಚರಿಕೆಯಿಂದ ವರ್ತಿಸಬೇಕು ಎಂದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರಪ್ಪ ದೊಗ್ಗಳ್ಳಿ ಮಾತನಾಡಿ, ದೇಶ ಸುತ್ತಿ ನೋಡಿ ಕೋಶ ಓದಿ ನೋಡಿ ಎಂಬ ನಾಣ್ನುಡಿಯಂತೆ ವಿದ್ಯಾರ್ಥಿಗಳು ಶೈಕ್ಷಣಿಕ ಪ್ರವಾಸ ಮಾಡುತ್ತಿರುವುದರಿಂದ ದೇಶದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ತಿಳಿಯಲು ಸಹಕಾರಿ ಯಾಗುತ್ತದೆ. ಪ್ರವಾಸ ಸಮಯದಲ್ಲಿ ಸಮಯಕ್ಕೆ ಹೆಚ್ಚು ಆದ್ಯತೆ ಕೊಡಬೇಕು, ಅಪಾಯಕಾರಿ ಸ್ಥಳಕ್ಕೆ ಹೋಗಬಾರದು. ಆರೋಗ್ಯದ ಮೇಲೆ ನಿಗಾವಹಿಸ ಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.

ಪ್ರವಾಸೋದ್ಯಮ ಇಲಾಖೆಯ ಮಹೇಶ್ವರಪ್ಪ ಮಾತನಾಡಿ, ಬಡತನ ರೇಖೆಗಿಂತ ಕೆಳಗೆ ಇರುವಂತಹ ಮಕ್ಕಳಿಗೆ 4 ದಿನ ಶೈಕ್ಷಣಿಕ ಪ್ರವಾಸ ಕೈಗೊಂಡಿದ್ದು, ತುಮಕೂರಿನ ಸಿದ್ದಗಂಗಾ ಮಠ, ಬೆಂಗಳೂರಿನ ಲಾಲ್ ಬಾಗ್, ಶಿವನಸಮುದ್ರ, ತಲಕಾಡು, ಮೈಸೂರು, ನಂಜನಗೂಡು, ಬೇಲೂರು, ಹಳೇಬಿಡು ಸೇರಿದಂತೆ ವಿವಿಧ ಪ್ರವಾಸಿ ತಾಣಗಳನ್ನು ವೀಕ್ಷಿಸುವ ಅವಕಾಶ ಮಾಡಿಕೊಡುತ್ತದೆ. ವಿದ್ಯಾರ್ಥಿಗಳು ಸರಿಯಾದ ರೀತಿಯಲ್ಲಿ ಸಹಕಾರ ನೀಡಿದಾಗ ಇನ್ನೂ ಹೆಚ್ಚಿನ ಪ್ರವಾಸಿ ತಾಣಗಳ ವೀಕ್ಷಣೆಗೆ ಅವಕಾಶ ಇರುತ್ತದೆ ಎಂದು ಹೇಳಿದರು. 

ಈ ಸಂದರ್ಭದಲ್ಲಿ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಈಶಪ್ಪ ಬೂದಿಹಾಳ್, ವಿಶ್ವನಾಥ್, ಮಂಜುನಾಥ್, ವಿ.ಧನ್ಯಕುಮಾರ್, ವಿ.ಬಿ. ಕೊಟ್ರೇಶ್, ಸುರೇಶ್ ಹಂಚಿನಗೌಡ್ರು, ಹನುಮಂತಪ್ಪ ಹಾಲಿವಾಣ, ಡಿ.ಎನ್. ಅನಿತಾ ರಾಜನಹಳ್ಳಿ, ಕರಿಬಸವ್ವ ಕಣವಿ, ಶಾಮರಾವ್ ಕುಲಕರ್ಣಿ, ಎ.ರಿಯಾಜ್ ಅಹ್ಮದ್, ನಗರಸಭೆ ಅರೋಗ್ಯ ಇಲಾಖೆಯ ರವಿಪ್ರಕಾಶ್ ಹಾಗೂ ಇತರರು ಹಾಜರಿದ್ದರು. 

error: Content is protected !!