ಜಗಳೂರು; ಬಾಲ್ಯವಿವಾಹ ಸಾಮಾಜಿಕ ಪಿಡುಗಿನ ವಿರುದ್ಧ ಜನಜಾಗೃತಿ ಅಗತ್ಯ : ಶಾಸಕ ಬಿ. ದೇವೇಂದ್ರಪ್ಪ

ಜಗಳೂರು; ಬಾಲ್ಯವಿವಾಹ ಸಾಮಾಜಿಕ ಪಿಡುಗಿನ ವಿರುದ್ಧ ಜನಜಾಗೃತಿ ಅಗತ್ಯ : ಶಾಸಕ ಬಿ. ದೇವೇಂದ್ರಪ್ಪ

ಜಗಳೂರು, ಜ. 29 – ಮೌಢ್ಯತೆಯ ಕಾರಣದಿಂದಾಗಿ  ಬಾಲ್ಯ ವಿವಾಹ ಸಾಮಾಜಿಕ ಪಿಡುಗಾಗಿದ್ದು. ನಿರ್ಮೂಲನೆಗೆ ಜಾಗೃತಿ ಅಗತ್ಯ ಎಂದು ಶಾಸಕ ಬಿ. ದೇವೇಂದ್ರಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.

ಪಟ್ಟಣದ ಗುರು ಭವನದಲ್ಲಿ ತಾಲ್ಲೂಕು ಆಡಳಿತ, ತಾಲ್ಲೂಕು ಆರೋಗ್ಯ ಇಲಾಖೆ, ಮಕ್ಕಳ ಮತ್ತು ಮಹಿಳಾ ಕಲ್ಯಾಣ ಇಲಾಖೆ, ಪೊಲೀಸ್ ಇಲಾಖೆ, ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿ ಕೊಂಡಿದ್ದ ಫೊಕ್ಸೋ, ಬಾಲ್ಯವಿವಾಹ ಕಾಯ್ದೆಗಳು ಹಾಗೂ ಕ್ಷಯ ರೋಗ ಕುರಿತು ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಬಾಲ್ಯ ವಿವಾಹಗಳ ಬಗ್ಗೆ ಕಾನೂನಿನಡಿ ಕಠಿಣ ಶಿಕ್ಷೆಗಳಿವೆ, ಆದರೆ ಜನ ಜಾಗೃತಿ ಮೂಡಿಸದೇ ಇರುವ ಕಾನೂನು, ಬಲ್ಪ್ ಇಲ್ಲದ ಕಂಬಗಳಂತಾಗಿವೆ.ತಾಲ್ಲೂಕಿನಲ್ಲಿ ಹೆಚ್ಚುತ್ತಿರುವ ಬಾಲ್ಯವಿವಾಹ ಪ್ರಕರಣಗಳಿಗೆ ಕಡಿವಾಣ ಹಾಕಲು ಅಂಗನವಾಡಿ, ಆಶಾ ಕಾರ್ಯಕರ್ತೆಯರು ಜನಜಾಗೃತಿ ಮೂಡಿಸಬೇಕು ಎಂದು ಶಾಸಕರು ಕರೆ ನೀಡಿದರು.

ಗರ್ಭಿಣಿ, ಬಾಣಂತಿಯರ ಆರೋಗ್ಯ, ಲಾಲನೆ-ಪಾಲನೆ ಸೇವೆಗೈಯ್ಯುತ್ತಿರುವ ಆಶಾ, ಅಂಗನವಾಡಿ ಕಾರ್ಯಕರ್ತೆಯರ ಸೇವೆ ಶ್ಲ್ಯಾಘನೀಯ. ಶ್ರಮಕ್ಕೆ ತಕ್ಕಂತೆ ಫಲ ಸಿಗದೇಯಿರುವ ಆಶಾ, ಅಂಗನವಾಡಿ ಕಾರ್ಯಕರ್ತೆಯರ ವೇತನ ಕುರಿತು ಸರ್ಕಾರದ ಮಟ್ಟದಲ್ಲಿ  ಧ್ವನಿಯಾಗುವೆ ಎಂದು ಭರವಸೆ ನೀಡಿದರು.

ಮಕ್ಕಳ‌ ಮತ್ತು ಮಹಿಳಾ‌ ಕಲ್ಯಾಣ ಇಲಾಖೆ ಉಪನಿರ್ದೇಶಕಿ ವಾಸಂತಿ ಉಪ್ಪಾರ ಮಾತನಾಡಿ, ಹೆಣ್ಣು ಮಕ್ಕಳು 18 ವರ್ಷ ವಯೋಮಾನದ ನಂತರ ವಿವಾಹವಾಗಲು ಜಾಗೃತಿ ಮೂಡಿಸಬೇಕು. ಜಿಲ್ಲೆಯಲ್ಲಿ 219 ಪ್ರಕರಣಗಳು ಬಾಲ್ಯ ವಿವಾಹಗಳು ನಡೆದಿದ್ದು. ಅವರಲ್ಲಿ ಬಹುತೇಕರು ತಂದೆ-ತಾಯಿ ಗಳಿಲ್ಲದವರಾಗಿದ್ದು. ಪೋಷಕರು ಜಾಗೃತರಾಗಬೇಕು, ಕಿಶೋರಿಯರಿಗೆ ಬಾಲ್ಯವಿವಾಹ ನಿಷೇಧ ಕಾಯ್ದೆ ಕುರಿತು ಅಂಗನವಾಡಿ ಕಾರ್ಯಕರ್ತೆಯರು ಮನವರಿಕೆ  ಮಾಡಬೇಕು ಎಂದು ತಿಳಿಸಿದರು.

ಆರ್‌ಸಿಆರ್  ಅಧಿಕಾರಿ ರೇಣುಕಾರಾಧ್ಯ ಮಾತನಾಡಿ, 18 ವರ್ಷದೊಳಗಿನ‌ ವಿವಾಹಿತ ಹೆಣ್ಣು ಮಕ್ಕಳಿಗೆ ತನ್ನ ಗರ್ಭಾವಸ್ಥೆಯಲ್ಲಾಗುವ ಬದಲಾವಣೆಗಳ ಬಗ್ಗೆ ಅರಿವಾಗುವುದಿಲ್ಲ. ಪರಿಣಾಮವಾಗಿ  ಗರ್ಭಪಾತಗಳಾಗಿ  ಮತ್ತೊಂದು ಮಗುವಿನ‌ ಜನನಕ್ಕೆ ತೊಂದರೆಯಾಗುತ್ತದೆ. ಅಧಿಕಾರಿಗಳು ಎಂಟಿಪಿ,ಪಿಸಿಪಿ ಕಾಯ್ದೆಗಳು ಹೆರಿಗೆಯಾಗುವ ತನಕ ಪಾಲಿಸ ಬೇಕಾಗುತ್ತದೆ, ದಾವಣಗೆರೆ ನಗರದಲ್ಲಿ 97‌ ಸ್ಕ್ಯಾನಿಂಗ್ ಯಂತ್ರಗಳಿವೆ ಎಂದು ತಿಳಿಸಿದರು.

ಪೊಲೀಸ್ ಇನ್ಸ್ ಪೆಕ್ಟರ್ ಶ್ರೀನಿವಾಸ್ ರಾವ್, ತಾಲ್ಲೂಕಿನಲ್ಲಿ ಹೆಚ್ಚುತ್ತಿರುವ ಫೊಕ್ಸೋ ಪ್ರಕರಣಗಳಿಗೆ ಪೋಷಕರೇ ಹೊಣೆಯಾಗಿದ್ದು. ಮಕ್ಕಳ ನಡವಳಿಕೆಯ ಬಗ್ಗೆ ಸದಾ ಜಾಗರೂಕರಾಗಿರಬೇಕು. ಮೊಬೈಲ್ ನಿಂದ‌ ಮಕ್ಕಳನ್ನು ದೂರವಿಟ್ಟು, ಕುಟುಂಬದಲ್ಲಿ ನಿತ್ಯ ಮಕ್ಕಳೊಂದಿಗೆ ಪರಸ್ಪರ ಚರ್ಚೆಗಳು ನಡೆಯಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ್ ಸೈಯ್ಯದ್ ಕಲೀಂ‌ ಉಲ್ಲಾ, ಜಿಲ್ಲಾ‌ ಕ್ಷಯ ರೋಗ ನಿರ್ಮೂಲನಾಧಿಕಾರಿ ಡಾ. ಮುರಳಿಧರ, ಮಕ್ಕಳ ಮತ್ತು ಮಹಿಳಾ ರಕ್ಷಣಾ ಘಟಕದ ಕವಿತಾ, ನೌಕರ‌ರ ಸಂಘದ ತಾಲ್ಲೂಕು ಅಧ್ಯಕ್ಷ ಸಿ.ಬಿ.ನಾಗರಾಜ್, ಪ.ಪಂ‌. ಮುಖ್ಯಾಧಿಕಾರಿ ಲೋಕ್ಯಾನಾಯ್ಕ, ಸಿಡಿಪಿಓ ಬೀರೇಂದ್ರಕುಮಾರ್, ಡಾ. ವಿಶ್ವನಾಥ್, ಆಡಳಿತ ವೈದ್ಯಾಧಿಕಾರಿ ಷಣ್ಮುಖ, ಮುಖಂಡ ಪಲ್ಲಾಗಟ್ಟೆ ಶೇಖರಪ್ಪ, ಮಹಮ್ಮದ್ ಗೌಸ್ , ವಕೀಲ ಅನೂಪ್ ರೆಡ್ಡಿ ಇದ್ದರು.

error: Content is protected !!