ದಾವಣಗೆರೆ, ಜ. 28- ಸಂವಿಧಾನದ ಆಶಯದಲ್ಲಿ ಭಾರತ ಗಣ ರಾಜ್ಯ ಬಲಿಷ್ಠವಾಗಿದೆ. ಸಂವಿಧಾನದ ವಿಧಿಗಳು ಸರ್ವರಿಗೂ ರಕ್ಷಣೆ ಆಗಿವೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಬಿ.ವಾಮದೇವಪ್ಪ ಹೇಳಿದರು.
ಇಲ್ಲಿನ ಕುವೆಂಪು ಕನ್ನಡ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ವಿನೂತನ ಮಹಿಳಾ ಸಮಾಜದ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ 75ನೇ ಗಣ ರಾಜ್ಯೋತ್ಸವ ಹಾಗೂ ಕರ್ನಾಟಕ ಸಂಭ್ರಮ ಮಾಲಿಕೆ -3 ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸ್ವಾತಂತ್ರ್ಯದ ನಂತರ 526 ಸಂಸ್ಥಾನಗಳನ್ನು ಒಗ್ಗೂಡಿಸಿದ್ದು, ಮಹತ್ತರ ಸಾಧನೆ. ವಿಶ್ವ ಕನ್ನಡ ಸಮ್ಮೇಳನ ದಾವಣಗೆರೆಯಲ್ಲಿ ನಡೆಯುವ ಸಿದ್ಧತೆಗಳು ನಡೆಯುತ್ತಿವೆ. ನಿರ್ಧಾರ ಅಂತಿಮಗೊಂಡರೆ, ಎಲ್ಲಾ ಸಂಘ-ಸಂಸ್ಥೆಗಳು ಸಹಕರಿಸಬೇಕು. ಕನ್ನಡ ನಾಡು-ನುಡಿ ಏಳಿಗೆಗೆ ಸದಾ ಬದ್ಧ ಎಂದರು.
ಪ್ರಾಧ್ಯಾಪಕಿ ಬಿ.ಜೆ.ಸಿದ್ದಲಿಂಗಮ್ಮ ಮಾತನಾಡಿ, ಭಾರತ ವಿವಿಧತೆಯಲ್ಲಿ ಏಕತೆ ಹೊಂದಿದೆ. ಸುಸಂಸ್ಕೃತ ದೇಶ. ಇಂದಿನ ಮಕ್ಕಳಲ್ಲಿ ಸಂಸ್ಕೃತಿ ಛಾಯೆಯ ನಡವಳಿಕೆ ಕುಸಿಯುತ್ತಿದೆ. ತಂದೆ-ತಾಯಿ, ಶಿಕ್ಷಕರು ಮಕ್ಕಳಲ್ಲಿ ಸಂಸ್ಕೃತಿ ಬಿಂಬಿಸುವರು. ನಮ್ಮ ಸಂಸ್ಕೃತಿ ಬಗ್ಗೆ ಗೌರವ ತೋರಿದರೆ ಮಕ್ಕಳಲ್ಲಿ ಅದು ಸ್ಥಿರವಾಗಿರುತ್ತದೆ. ಕರ್ನಾಟಕ ಹಲವು ಪ್ರಥಮಗಳಿಗೆ ಮುನ್ನುಡಿ ಬರೆದಿದೆ. ಸಮಾಜವಾದ, ಜಾತ್ಯತೀತ ನಿಲುವು 12ನೇ ಶತಮಾನದಲ್ಲೇ ನೆಲೆಗೊಂಡಿದ್ದವು ಎಂದು ಹೇಳಿದರು.
ವಿವಿಧ ಸ್ಪರ್ಧೆಗಳಲ್ಲಿ ಜಯ ಗಳಿಸಿದ ಮಹಿಳೆಯರಿಗೆ ಬಹುಮಾನ ವಿತರಿಸಲಾಯಿತು.
ವಿನೂತನ ಮಹಿಳಾ ಸಂಘದ ಅಧ್ಯಕ್ಷೆ ರೇಖಾ ಓಂಕಾರಪ್ಪ, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿಗಳಾದ ದಿಳ್ಯಪ್ಪ, ರೇವಣಸಿದ್ದಪ್ಪ ಅಂಗಡಿ ಮಾತನಾಡಿದರು. ಜಿಲ್ಲಾ ಕಸಾಪ ಸಂಘಟನಾ ಕಾರ್ಯದರ್ಶಿ ಜಿಗಳಿ ಪ್ರಕಾಶ್, ಸಹ ಕಾರ್ಯದರ್ಶಿ ಕೆ.ಎಸ್.ವೀರೇಶ್ ಪ್ರಸಾದ್, ಪದಾಧಿಕಾರಿ ಸತ್ಯಭಾಮ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ ಬಿ ಪರಮೇಶ್ವರಪ್ಪ ಇದ್ದರು.
ಲೀಲಾ ಕುಬೇರಪ್ಪ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಚೇತನ ಮಂಜುನಾಥ್ ಸ್ವಾಗತಿಸಿದರು, ರೂಪ ಶಂಕರ ಮೂರ್ತಿ ವಂದಿಸಿದರು.