ಪ್ರತಿಮೆ ಅನಾವರಣ : ಮಂಜಪ್ಪ ಹೆಸರು ಕೈಬಿಟ್ಟಿರುವುದಕ್ಕೆ ಆಕ್ರೋಶ

ಪ್ರತಿಮೆ ಅನಾವರಣ : ಮಂಜಪ್ಪ  ಹೆಸರು ಕೈಬಿಟ್ಟಿರುವುದಕ್ಕೆ ಆಕ್ರೋಶ

ಹೊನ್ನಾಳಿ, ಜ.28- ಪಟ್ಟಣದ ದೇವನಾಯಕನಹಳ್ಳಿಯ ಕನಕದಾಸ ವೃತ್ತದಲ್ಲಿ ಪ್ರತಿಷ್ಠಾಪಿಸಿರುವ ಕನಕದಾಸರ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ.ಮಂಜಪ್ಪ ಅವರ ಹೆಸರನ್ನು ಆಹ್ವಾನ ಪತ್ರಿಕೆಯಲ್ಲಿ ಕೈಬಿಟ್ಟಿರುವುದು ಅತ್ಯಂತ ಖಂಡನೀಯ ಎಂದು ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲ್ಲೂಕುಗಳ ಕುರುಬ ಸಂಘದ ಕಾರ್ಯಾಧ್ಯಕ್ಷ ಧರ್ಮಪ್ಪ ಹಾಗೂ ಅಧ್ಯಕ್ಷ ನೆಲಹೊನ್ನೆ ಮೋಹನ್ ಹೇಳಿದರು.

ಶನಿವಾರ ಪಟ್ಟಣದಲ್ಲಿ ಕರೆಯಲಾಗಿದ್ದ ಸಂಘದ ಸಭೆಯಲ್ಲಿ ಅವರು ಮಾತನಾಡಿದರು.

ಫೆ.3 ರಂದು ಹೊನ್ನಾಳಿಯಲ್ಲಿ ಕನಕದಾಸರ ಕಂಚಿನ ಪ್ರತಿಮೆ ಅನಾವರಣ ಕಾರ್ಯಕ್ರವನ್ನು ಕುರುಬ ಸಮಾಜದ ಮತ್ತೊಂದು ಸಂಘಟನೆಯಾದ ಹೊನ್ನಾಳಿ ತಾಲ್ಲೂಕು ಕುರುಬ ಸಮಾಜದ ವತಿಯಿಂದ ಹಮ್ಮಿಕೊಂಡಿದ್ದು ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಹ್ವಾನಿಸಿರುವುದು ಸಂತೋಷದ ವಿಷಯ. 

ಆದರೆ ಈ ಸಮಾರಂಭದ ಆಹ್ವಾನ ಪತ್ರಿಕೆಯಲ್ಲಿ ಕುರುಬ ಸಮಾಜದ ಪ್ರಭಾವಿ ಮುಖಂಡರೂ ಹಾಗೂ  ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷರೂ ಆದ  ಎಚ್.ಬಿ.ಮಂಜಪ್ಪ ಅವರ ಹೆಸರನ್ನು ಕೈಬಿಟ್ಟಿರುವುದು ಸರಿಯಲ್ಲ, ಅವರ ಹೆಸರನ್ನು ಏಕೆ ಕೈಬಿಡಲಾಗಿದೆ ಎಂದು ಸಂಬಂಧಪಟ್ಟವರು ಉತ್ತರಿಸಬೇಕು ಎಂದು ಹೇಳಿದರು.  

ಫೆಬ್ರವರಿ 2 ನೇ ತಾರಿಖಿನೊಳಗೆ ಎಚ್.ಬಿ. ಮಂಜಪ್ಪ ಅವರ ಹೆಸರನ್ನು ಕೈ ಬಿಟ್ಟಿರುವುದಕ್ಕೆ ಸೂಕ್ತ ಕಾರಣ ನೀಡಬೇಕು. ಇಲ್ಲದಿದ್ದರೆ, ನಮ್ಮ ಅವಳಿ ತಾಲ್ಲೂಕು ಕುರುಬ ಸಂಘದ ವತಿಯಿಂದ ನಾವೇ ಕನಕದಾಸರ ಪ್ರತಿಮೆಯನ್ನು ಅನಾವರಣಗೊಳಿಸಿ ಮಾಲಾರ್ಪಣೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು. 

ಸಂಘದ ಗೌರವಾಧ್ಯಕ್ಷ ಆರುಂಡಿ ಪ್ರಕಾಶ್ ಮಾತನಾಡಿ, ಎಚ್.ಬಿ.ಮಂಜಪ್ಪ ಜಿಲ್ಲಾ ಮಟ್ಟದಲ್ಲಿ ಹಾಗೂ ರಾಜಕೀಯವಾಗಿ ಪಕ್ಷದಲ್ಲಿ ಪ್ರಭಾವಿ ವ್ಯಕ್ತಿಯಾಗಿ ಬೆಳೆಯುತ್ತಿದ್ದಾರೆ.  ಇದನ್ನು ಸಹಿಸದ ನಮ್ಮವರೇ ಕೆಲವರು ಎಚ್.ಬಿ. ಮಂಜಪ್ಪ ಅವರನ್ನು ತುಳಿಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದರು. 

ಸಂಘದ ಉಪಾಧ್ಯಕ್ಷ ಎಚ್. ನರಸಪ್ಪ,  ಎಚ್.ಡಿ. ವಿಜೇಂದ್ರಪ್ಪ, ಬೆನಕಪ್ಪ ಹರಳಹಳ್ಳಿ, ಕುಂಬಳೂರು ವಾಗೀಶ್‌, ಕೆ. ಪುಟ್ಟಪ್ಪ, ಖಜಾಂಚಿ ಎಚ್.ಎ. ನರಸಿಂಹಪ್ಪ, ಪ್ರಧಾನ ಕಾರ್ಯದರ್ಶಿ ಎಂ.ಆರ್. ಮಹೇಶ್, ಮುಕ್ತೇನಹಳ್ಳಿ ಕನಕದಾಸ ಮತ್ತಿತರರು ಉಪಸ್ಥಿತರಿದ್ದರು. 

error: Content is protected !!