ಲಯನ್ಸ್ ಶಾಲಾ ಶ್ರೀರಾಮ ಪೂಜಾ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಎಚ್.ಬಿ.ಮಂಜುನಾಥ
ದಾವಣಗೆರೆ, ಜ.28- ಶ್ರೀರಾಮಚಂದ್ರನ ಆದರ್ಶ ಗುಣ ವಿಶೇಷಗಳು ಬಾಲಕನಾಗಿದ್ದಾಗಲೇ ಪ್ರಕಟವಾಗುತ್ತಿದ್ದವು, ಇವು ಇಂದಿನ ಶಾಲಾ ವಿದ್ಯಾರ್ಥಿಗಳಿಗೂ ಮಾರ್ಗ ದರ್ಶಕವಾಗಿವೆ ಎಂದು ಹಿರಿಯ ಪತ್ರಕರ್ತ ಎಚ್ ಬಿ ಮಂಜುನಾಥ ಹೇಳಿದರು.
ಅವರು ನಗರದ ದೇವರಾಜ ಅರಸು ಬಡಾವಣೆಯ ಲಯನ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಏರ್ಪಾಡಾಗಿದ್ದ ಶ್ರೀರಾಮ ಭಕ್ತಿ ಸಮರ್ಪಣಾ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ ಶ್ರೀ ರಾಮನು ಬಾಲಕನಾಗಿದ್ದಾಗಲೇ ವಿಶ್ವಾಮಿತ್ರರು ರಾಮನಿಗೆ ಸಕಲಶಸ್ತ್ರಾಸ್ತ್ರಾದಿ ವಿದ್ಯೆಗಳನ್ನು ಕಲಿಸಿಕೊಟ್ಟ ನಿದರ್ಶನಗಳು ರಾಮಾಯಣದಲ್ಲಿ ಬರುತ್ತದೆಯಾದರೂ ಅವರು ಲಕ್ಷ್ಮಣನಿಗೂ ಕಲಿಸಿಕೊಟ್ಟದ್ದು ಎಲ್ಲೂ ಕಂಡುಬರುವುದಿಲ್ಲ. ಆದರೆ, ಲಕ್ಷ್ಮಣನೂ ರಾಮನಂತೆ ಸಕಲ ಶಸ್ತ್ರಾಸ್ತ್ರಗಳ ಪರಿಣತನಾಗಿದ್ದು, ಹೇಗೆಂದರೆ ರಾಮ ತಾನು ಕಲಿತು ಸಿದ್ಧಿಸಿಕೊಂಡಿದ್ದನ್ನು ತಮ್ಮ ಲಕ್ಷ್ಮಣನಿಗೆ ಹೇಳಿಕೊಟ್ಟ ಎಂಬುದು ಗೊತ್ತಾಗುತ್ತದೆ.
ಇಂದಿನ ವಿದ್ಯಾರ್ಥಿಗಳು ಸಹಾ ತಾವು ಕೇಳಿ ಅರ್ಥ ಮಾಡಿಕೊಂಡ ಪಾಠಗಳನ್ನು ಅರ್ಥ ಮಾಡಿಕೊಳ್ಳದ ಸಹಪಾಠಿಗಳಿಗೆ ಮನದಟ್ಟಾಗುವಂತೆ ಹೇಳಬೇಕು ಎಂಬುವ ಆದರ್ಶ ಸಂದೇಶಗಳು ಇದರಿಂದ ನಮಗೆ ತಿಳಿಯುತ್ತದೆ ಎಂದರಲ್ಲದೇ, ನಾರಾಯಣನ ಅವತಾರಿಯಾದ ಶ್ರೀ ರಾಮನು ಸ್ವತಃ ಶಿವಲಿಂಗ ಸ್ಥಾಪನೆ ಮಾಡಿ ಪೂಜಿಸಿದರೆ ಶಿವನು ರಾಮನ ಧ್ಯಾನ ಮಾಡುವಂತೆ ಪಾರ್ವತಿಗೆ ಹೇಳಿದ ಎಂಬುದು ತಿಳಿಯುತ್ತದೆ. ಹೀಗಿರುವಾಗ ಹರಿಹರರಲ್ಲಿ ಭೇದವಿಲ್ಲ ಎಂಬುದನ್ನು ನಾವು ತಿಳಿಯಬೇಕು ಎಂದರು.
ತ್ರೇತಾ ಯುಗದ ಅಯೋಧ್ಯೆಯ ವೈಭವ, ನಂತರದಲ್ಲಿ ವಿದೇಶಿ ಆಕ್ರಮಣಕಾರಿಗಳ ದಾಳಿ ಹಾಗೂ ಅವರು ಮಾಡಿದ ವಿನಾಶ, ಈಗಿನ ಅಯೋಧ್ಯೆಯ ಪುನರ್ ನಿರ್ಮಾಣ ಇವುಗಳ ಸವಿವರ ನುಡಿ ಚಿತ್ರಣವನ್ನು ಮಂಜುನಾಥ್ ಮಕ್ಕಳಿಗೂ ಅರ್ಥವಾಗುವಂತೆ ವಿವರಿಸಿದರು.
ಲಯನ್ಸ್ ಕ್ಲಬ್ ಶಾಲೆ ಹಾಗೂ ಟ್ರಸ್ಟಿನ ಪ್ರಮುಖರುಗಳಾದ ಡಾ. ಬಿಎಸ್ ನಾಗಪ್ರಕಾಶ್, ಆರ್.ಜಿ.ಶ್ರೀನಿವಾಸ್ ಮೂರ್ತಿ, ಬೆಳ್ಳೂಡಿ ಶಿವಕುಮಾರ್, ಬಂಡಿವಾಡ್ ವೈ.ಬಿ.ಸತೀಶ್, ಭೀಮಾನಂದ, ಮುಖ್ಯೋಪಾಧ್ಯಾಯರಾದ ಶಾಂತವೀರಪ್ಪ ರೇಖಾ ಮುಂತಾಗಿ, ಅಧ್ಯಾಪಕ ವರ್ಗದವರು ಭಾಗವಹಿಸಿದ್ದರು.