ವಚನ ಸಾಹಿತ್ಯದ ಮೌಲ್ಯಗಳ ಅಳವಡಿಕೆಯಿಂದ ಜೀವನ ಸುಧಾರಣೆ

ವಚನ ಸಾಹಿತ್ಯದ ಮೌಲ್ಯಗಳ ಅಳವಡಿಕೆಯಿಂದ ಜೀವನ ಸುಧಾರಣೆ

ಹರಪನಹಳ್ಳಿ, ಜ. 24 – ಸಮಾಜದ ಎಲ್ಲಾ  ಸಮುದಾಯದವರು ವಚನವನ್ನು ಮುಖ್ಯ ಮಾಧ್ಯಮವನ್ನಾಗಿ ಮಾಡಿಕೊಂಡು, ತಮ್ಮ ಅನುಭವಗಳನ್ನು ಹೇಳಿಕೊಂಡಿದ್ದರಿಂದ ವಚನ ಸಾಹಿತ್ಯ ಒಂದು ಚಳವಳಿಯೂ ಆಯಿತು ಎಂದು ಟಿಎಪಿಸಿ ಎಂ.ಎಸ್. ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನಸ್ವಾಮಿ ಕಲ್ಮಠ ಹೇಳಿದರು.

ತಾಲ್ಲೂಕಿನ  ಚಿರಸ್ತಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ತೇರುಬೀದಿ ಆವರಣದಲ್ಲಿ ವಿಜಯನಗರ ಶ್ರೀ ಕೃಷ್ಣ ದೇವರಾಯ ವಿಶ್ವವಿದ್ಯಾಲಯ ಬಳ್ಳಾರಿ, ವೀರಶೈವ ವಿದ್ಯಾವರ್ಧಕ ಸಂಘ ಬಳ್ಳಾರಿ, ಅಂಬ್ಲಿ ದೊಡ್ಡ ಭರಮಪ್ಪ ಪ್ರಥಮ ದರ್ಜೆ ಮಹಾ ವಿದ್ಯಾಲಯದ ವತಿಯಿಂದ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ವಾರ್ಷಿಕ ಶಿಬಿರ  ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಹಮ್ಮಿಕೊಂಡಿದ್ದ ದತ್ತಿ  ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಚನಕಾರರು ಸಮಾಜ ಸುಧಾರಣೆಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ತಮ್ಮ ವಚನಗಳ ಮೂಲಕ ಸಮಾ ಜಕ್ಕೆ ದಾರಿದೀಪವಾದರು. ವಚನ ಸಾಹಿತ್ಯವು ಸಕಲ ಜೀವ ರಾಶಿಗೂ ಒಳಿತು ಬಯಸುವಂತಹದ್ದಾಗಿದೆ ಎಂದರು.

ನ್ಯಾಯವಾದಿ ಕಣಿವಿಹಳ್ಳಿ ಸಿ. ಮಂಜುನಾಥ ಗ್ರಾಮ ನೈರ್ಮಲ್ಯಿಕರಣ ಕುರಿತು ವಿಶೇಷ ಉಪನ್ಯಾಸ ನೀಡಿ, ಕರ್ನಾಟಕ ಸರ್ಕಾರವು ನಿರ್ಮಲ ಗ್ರಾಮ ಯೋಜನೆ, ಸ್ವಚ್ಛ ಗ್ರಾಮ ಯೋಜನೆ ಮುಂತಾದ ಯೋಜನೆಗಳನ್ನು ಹಮ್ಮಿ ಕೊಂಡಿತ್ತು. 2012ರ ಬೇಸ್ಲೈನ್ ಸಮೀಕ್ಷೆಯ ಅನುಸಾರ ಕರ್ನಾಟಕದ 70.32 ಲಕ್ಷ ಗ್ರಾಮೀಣ ಕುಟುಂಬಗಳಲ್ಲಿ 35% ಕುಟುಂಬಗಳು ವೈಯಕ್ತಿಕ ಶೌಚಾಲಯವನ್ನು ಹೊಂದಿದ್ದು, 65% ಕುಟುಂಬ ಗಳಲ್ಲಿ ಶೌಚಾಲಯಗಳಿರಲಿಲ್ಲ. ಗ್ರಾಮೀಣ ಭಾರತದಲ್ಲಿ ಸಂಪೂರ್ಣ ನೈರ್ಮಲ್ಯವನ್ನು ಸಾಧಿಸುವ ಉದ್ದೇಶದಿಂದ ಭಾರತ ಸರ್ಕಾರವು 2014 ಅಕ್ಟೋಬರ್ ನಲ್ಲಿ ಸ್ವಚ್ಛ ಭಾರತ ಮಿಷನ್ ಯೋಜನೆಯನ್ನು ಜಾರಿಗೆ ತಂದಿತು ಎಂದು ಹೇಳಿದರು.

ಆರೋಗ್ಯ ಮತ್ತು ಸ್ವಚ್ಛತೆ ಒಂದೇ ನಾಣ್ಯದ ಎರಡು ಮುಖಗಳು. ಸ್ವಚ್ಛತೆ ಹೊರತಾಗಿ ಆರೋಗ್ಯ ಇರಲು ಸಾಧ್ಯವಿಲ್ಲ. ಆದ್ದರಿಂದ ಗ್ರಾಮ ನೈರ್ಮಲ್ಯಕ್ಕೆ ಆದ್ಯತೆ ನೀಡಬೇಕು  ಎಂದರು.

ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ. ಉಚ್ಚೆಂಗೆಪ್ಪ    ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಗಾಂಧೀಜಿ ಅವರ ಗ್ರಾಮ ಸ್ವರಾಜ್ಯದ ಕನಸು-ನನಸು ಮಾಡುವಲ್ಲಿ ಎಲ್ಲರ ಸಹಕಾರ ಮುಖ್ಯ,  ಗ್ರಾಮಾಭಿವೃದ್ಧಿ ಮೇಲೆ ರಾಷ್ಟ್ರಾಭಿವೃದ್ಧಿ ಸೌಧ ನಿಂತಿದೆ. ಹಳ್ಳಿಗಳ ಉದ್ಧಾರ ಮಹಾತ್ಮಾಗಾಂಧಿ ಅವರ ಮನದಾಳದ ಬಯಕೆಯಾಗಿತ್ತು. ರಾಮ ರಾಜ್ಯದ ಕಲ್ಪನೆ ಸಾಕಾರಗೊಳ್ಳಬೇಕಾದರೆ ಹಳ್ಳಿಗಳು ಸಾಮಾಜಿಕವಾಗಿ, ಆರ್ಥಿಕವಾಗಿ ಹಾಗೂ ಶೈಕ್ಷಣಿಕವಾಗಿ ಮುಂದೆ ಬರಬೇಕು ಎಂದರು. ಕಾರ್ಯಕ್ರಮದಲ್ಲಿ  ಸಹಾಯಕ ಪ್ರಾಧ್ಯಾಪಕ ಡಾ.ಜಿ.ಗೋವರ್ದನ, ಉಪನ್ಯಾಸಕರಾದ ಕೆ. ಶಕುಂತಲಾ ಪ್ರಸನ್ನ ಮಾತನಾಡಿದರು.

ಈ ವೇಳೆ ಶಿಬಿರಾಧಿಕಾರಿಗಳಾದ  ಎಸ್. ಆನಂದ,  ಡಾ.ಎ.ಎಂ. ರಾಜಶೇಖರಯ್ಯ, ಸಹ ಶಿಬಿರಾಧಿಕಾರಿ ಸಿ. ನವಾಜ್ ಬಾಷ  ವಿದ್ಯಾರ್ಥಿ ಪ್ರತಿನಿದಿಗಳ ಕಾರ್ಯದರ್ಶಿ ರೇಣುಕಪ್ರಸಾದ್‌ ಕಲ್ಮಠ ಮುಖಂಡರಾದ  ಹಲಗೇರಿ ಪರಮೇಶ್ವರಪ್ಪ, ಟಿ. ಮಂಜುನಾಥ, ಹಾಲಪ್ಪ  ಸೇರಿದಂತೆ  ಇತರರು ಇದ್ದರು.

error: Content is protected !!