ಗುರು ಸ್ಪಂದನ ಕಾರ್ಯಕ್ರಮ ಶಿಕ್ಷಕರಿಗೆ ವರದಾನ

ಗುರು ಸ್ಪಂದನ ಕಾರ್ಯಕ್ರಮ ಶಿಕ್ಷಕರಿಗೆ ವರದಾನ

ಹರಿಹರದ ಕಾರ್ಯಕ್ರಮದಲ್ಲಿ ಡಿಡಿಪಿಐ ಕೊಟ್ರೇಶಪ್ಪ

ಹರಿಹರ, ಜ. 24 – ಸೇವಾ ಪುಸ್ತಕದಲ್ಲಿನ (ಎಸ್‍ಆರ್ ಬುಕ್) ನ್ಯೂನತೆಗಳನ್ನು ಸರಿಪಡಿಸಿಕೊಳ್ಳಲು ಶಿಕ್ಷಣ ಇಲಾಖೆ ಜಾರಿ ಮಾಡಿರುವ ಗುರುಸ್ಪಂದನ ಕಾರ್ಯಕ್ರಮ ಶಿಕ್ಷಕರಿಗೆ ವರದಾನವಾಗಿದೆ ಎಂದು ಶಿಕ್ಷಣ ಇಲಾಖೆ ಉಪ ನಿರ್ದೇಶಕ ಜಿ. ಕೊಟ್ರೇಶಪ್ಪ ತಿಳಿಸಿದರು.

ನಗರದ ಗುರುಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಗುರುಸ್ಪಂದನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸೇವಾ ಪುಸ್ತಕದಲ್ಲಿನ ಒಂದು ಸಣ್ಣ ತಪ್ಪು, ಮಾಹಿತಿ ನಮೂದಾಗಿದ್ದರೂ ಅದನ್ನು ಸರಿಪಡಿಸಲು ವರ್ಷಗಟ್ಟಲೆ ಸಮಯ ಬೇಕಾಗುತ್ತಿತ್ತು. ಆದರೀಗ ಅದು ಸುಲಭವಾಗಿದೆ. ಶಿಕ್ಷಕರು ತಮ್ಮ ಸೇವಾ ಪುಸ್ತಕದಲ್ಲಿರಬಹುದಾದ ನ್ಯೂನತೆಗಳನ್ನು ಪರಿಶೀಲಿಸಿ, ಅರ್ಜಿ ಸಲ್ಲಿಸಿದರೆ ಬಿಇಒ ಹಂತದಲ್ಲೆ ತಿದ್ದುಪಡಿ ಮಾಡಿ ಸರಿಪಡಿಸಲಾಗುವುದು. ವಿನೂತನವೆನಿಸಿದ ಗುರುಸ್ಪಂದನ ಕಾರ್ಯಕ್ರಮದ ಯಶಸ್ಸಿಗೆ, ಇಲಾಖೆಯ ಸಿಬ್ಬಂದಿ, ಶಿಕ್ಷಕರ ಸಂಘಟನೆ, ಶಿಕ್ಷಕರು ಸಹಕರಿಸಬೇಕೆಂದು ತಿಳಿಸಿದರು.

ಸರ್ವ ಶಿಕ್ಷಾ ಅಭಿಯಾನ (ಎಸ್‍ಎಸ್‍ಎ), ಪದವೀಧರ ಶಿಕ್ಷಕರು (ಜಿಪಿಟಿ), ಸಿಆರ್‍ಪಿ, ಬಿಆರ್‍ಪಿ ಹಂತದ ಎಲ್ಲಾ ಶಿಕ್ಷಕರು ಈ ಯೋಜನೆ ಲಾಭ ಪಡೆಯಬಹುದಾಗಿದೆ ಎಂದು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬಿಇಒ ಎಂ. ಹನುಮಂತಪ್ಪ ಹೇಳಿದರು.  

ರಾಜ್ಯ ಸರ್ಕಾರ ಹಾಗೂ ಶಿಕ್ಷಣ ಇಲಾಖೆಯಿಂದ ಜಾರಿ ಮಾಡಿರುವ ಗುರುಸ್ಪಂದನ ಕಾರ್ಯಕ್ರಮ ಶಿಕ್ಷಕರಿಗೆ ಅತ್ಯಂತ ಸಹಕಾರಿಯಾಗಿದೆ. ಅಗತ್ಯ ಇರುವ ಎಲ್ಲಾ ಶಿಕ್ಷಕರು ಈ ಯೋಜನೆ ಲಾಭ ಪಡೆದುಕೊಳ್ಳಬೇಕೆಂದು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಘಟಕ ಅಧ್ಯಕ್ಷ ಎಚ್.ಚಂದ್ರಪ್ಪ ಹೇಳಿದರು.

ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕ ಅಧ್ಯಕ್ಷ ಎ.ಕೆ. ಭೂಮೇಶ್ ಮಾತನಾಡಿದರು.

ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಶರಣಕುಮಾರ್ ಹೆಗಡೆ. ಪದಾಧಿಕಾರಿಗಳಾದ  ಮಂಜಪ್ಪ ಬಿದರಿ, ಸಾಕಮ್ಮ, ಮುಷ್ತಾಖ್ ಅಹ್ಮದ್, ಗದಿಗೆಪ ಹಳೆಮನೆ, ಹೆಚ್. ಜ್ಯೋತಿ, ಕರಿಬಸಪ್ಪ ಕುಪ್ಪೆಲೂರ್, ವಿನೋದಮ್ಮ, ಚನ್ನಬಸಪ್ಪ, ರುದ್ರಪ್ಪ, ಸುಮಂಗಲ, ನಾಗರಾಜ್, ಬಿಆರ್‍ಸಿ. ಕೃಷ್ಣಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ವ್ಯವಸ್ಥಾಪಕ ಅಸ್ಲಂ ಭಾಷಾ, ಮೇಲ್ವಿಚಾರಕ ಕುಮಾರಸ್ವಾಮಿ ಇದ್ದರು.

error: Content is protected !!