ಮುಖ್ಯಮಂತ್ರಿ ವಿರುದ್ಧ ಅಸಭ್ಯ ಪೋಸ್ಟ್ : ಓರ್ವನ ಬಂಧನ

ದಾವಣಗೆರೆ, ಜ. 24 – ಅಯೋಧ್ಯೆ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ದಿನದಂದು ರಜೆ ನೀಡದ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅವಹೇಳನ ಮಾಡಿ ವಾಯ್ಸ್ ಮೆಸೇಜ್ ಅನ್ನು ವಾಟ್ಸ್‌ಆಪ್ ಗ್ರೂಪ್ ಒಂದರಲ್ಲಿ ಹಾಕಿದ್ದ ನಿಟುವಳ್ಳಿಯ ಕೊಟ್ರೇಶ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ವಶಕ್ಕೆ ಪಡೆದಿದ್ದಾರೆ.

ವಾಟ್ಸ್‌ಆಪ್‌ ಮೂಲಕ ಹರಡಿದ ಮೆಸೇಜ್ ಬಗ್ಗೆ ತಿಳಿದ ಕೆ.ಟಿ.ಜೆ. ನಗರ ಪೊಲೀಸರು ಸ್ವಯಂ ಪ್ರಕರಣ ದಾಖಲಿಸಿ ಕೊಂಡು ಆರೋಪಿಯನ್ನು ವಶಕ್ಕೆ ತೆಗೆದು ಕೊಂಡಿದ್ದಾರೆ. ಸದರಿ ಪ್ರಕರಣಕ್ಕೆ ಸಂಬಂಧಿಸಿ ದಂತೆ ತನಿಖೆ ಮುಂದುವರೆಯುತ್ತಿದೆ.

ಮತ್ತೊಂದು ಪ್ರತ್ಯೇಕ ಪ್ರಕರಣದಲ್ಲಿ ಅಲ್ಪಸಂಖ್ಯಾತ ಸಮುದಾಯದ ಭಾವನೆಗಳಿಗೆ ಧಕ್ಕೆ ತರುವ ರೀತಿಯಲ್ಲಿ ವಿಡಿಯೋ ಮಾಡಿ ಮೊಬೈಲ್‌ ಮೂಲಕ ಕಳಿಸಿದ ನಿಟುವಳ್ಳಿಯ ಮನು ಹಾಗೂ ನಿಖಿಲ್ ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ದಾದಾಪೀರ್ ಎಂಬುವವರು ನೀಡಿದ ದೂರು ಆಧರಿಸಿ ಕೆ.ಟಿ.ಜೆ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ನಂತರ ಪೊಲೀಸರು ಇಬ್ಬರನ್ನು ವಶಕ್ಕೆ ತೆಗೆದುಕೊಂಡು ತನಿಖೆ ನಡೆಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ರೀತಿಯ ಪ್ರಚೋದನಕಾರಿ, ವ್ಯಕ್ತಿ ನಿಂದನೆ, ಧಾರ್ಮಿಕ ನಿಂದನೆ, ದ್ವೇಷ ಭಾಷಣ, ದೇಶ ವಿರೋಧಿ ಪೋಸ್ಟ್‌ಗಳನ್ನು ಪ್ರಕಟಿಸುವುದು ಹಾಗೂ ಹಂಚಿಕೊಳ್ಳುವುದು ಕಾನೂನು ಬಾಹಿರ. ಈ ರೀತಿ ಪೋಸ್ಟ್ ಮಾಡುವ ವ್ಯಕ್ತಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು. ಸಾಮಾಜಿಕ ಜಾಲತಾಣ ಬಳಸುವಾಗ ಎಚ್ಚರವಿರಬೇಕು ಎಂದು ಪೊಲೀಸ್ ಇಲಾಖೆ ತಿಳಿಸಿದೆ.

error: Content is protected !!