ಮಾಯಕೊಂಡ, ಜ. 23 – ಹೊಸದುರ್ಗ ಮಠದಲ್ಲಿ ವಿಶ್ವದ ಬೃಹತ್ ಏಕಶಿಲಾ ಕನಕ ಮೂರ್ತಿ ನಿರ್ಮಾಣ ನಡೆಯುತ್ತಿದೆ. ಹಲವು ಅಭಿವೃದ್ಧಿ ಕಾಮಗಾರಿಗಳನ್ನೂ ನಡೆಸಲಾಗುತ್ತಿದೆ. ಸಮಾಜ ಬಾಂಧವರು ಹೆಚ್ಚಿನ ಪ್ರಮಾಣದಲ್ಲಿ ತನು, ಮನ, ಧನ, ಸಹಾಯ ಮಾಡಬೇಕು ಎಂದು ಕಾಗಿನೆಲೆ ಶಾಖಾ ಮಠದ ಹೊಸದುರ್ಗ ಪೀಠಾಧ್ಯಕ್ಷರಾದ ಶ್ರೀ ಈಶ್ವರಾನಂದ ಪುರಿ ಸ್ವಾಮೀಜಿ ಮಾಹಿತಿ ನೀಡಿದರು.
ಇಲ್ಲಿನ ಬೀರಲಿಂಗೇಶ್ವರ ದೇವಾಲಯದ ಆವರಣದಲ್ಲಿ ‘ನೂರು ದಿನ, ಸಾವಿರ ಹಳ್ಳಿ, ಒಂದು ಗುರಿ’ ಕಾರ್ಯಕ್ರಮದ ಸಾನಿಧ್ಯವಹಿಸಿ ಅವರು ಮಾತನಾಡಿದರು.
ಹಾಲುಮತ ಸಮಾಜದಲ್ಲಿ ಜಾಗೃತಿ ಮೂಡಿಸಲು, ಸಂವಾದ ನಡೆಸಲು ಪ್ರತಿ ದಿನ ಹತ್ತು ಹಳ್ಳಿಗಳಂತೆ ನೂರು ದಿನ ಪ್ರವಾಸ ಮಾಡಿ, ಸಾವಿರ ಹಳ್ಳಿಗಳಿಗೆ ಭೇಟಿ ನೀಡಿ ಜಾಗೃತಿ ಮೂಡಿಸಲಾಗುತ್ತಿದೆ. ಈಗಾಗಲೇ ಸುಮಾರು 450 ಗ್ರಾಮಗಳಿಗೆ ಭೇಟಿ ನೀಡಲಾಗಿದೆ. ಸಮಾಜದ ಯುವಕರು ಅನ್ಯ ದೈವಗಳ ಮೊರೆ ಹೋಗುವುದನ್ನು ಬಿಟ್ಟು, ಹಾಲುಮತ ಸಂಸ್ಕೃತಿ ಉಳಿಸಿ, ಬೆಳೆಸ ಬೇಕು, ಸಮಾಜ ಬಾಂಧವರು ಸಾಮಾಜಿಕವಾಗಿ ಸುಧಾರಣೆಯಾಗಬೇಕು. ನಮ್ಮ ಮಠ ಕಟ್ಟಿ ಮೂವತ್ತು ವರ್ಷಗಳಾಗಿವೆ, ಮುಖ್ಯಮಂತ್ರಿ ಹುದ್ದೆಯನ್ನೂ ಪಡೆದಾಗಿದೆ, ಆದರೂ ಜಾಗೃತಿಯಾಗಿಲ್ಲ. ನಮ್ಮವರು ಸಕಲ ಶಕ್ತಿ ಹೊಂದಿದ ಕುಲದೈವ ಬೀರೇಶ್ವರನನ್ನು ನಿರ್ಲಕ್ಷಿಸಿ, ಬೇರೆ ಬೇರೆ ದೇವರುಗಳಿಗೆ ಮೊರೆ ಹೋಗುತ್ತಿರುವುದು ದುರಂತ. ಭಂಡಾರ, ಜೋಳಿಗೆ, ಬೆತ್ತ, ಕರಿ ಕಂಬಳಿ, ಕುರುಬರ ಲಾಂಛನಗಳು. ಕಂಬಳಿ ಜೀವಂತ ಪೀಠ, ಶ್ರೇಷ್ಠ ಗದ್ದುಗೆ, ಗುರು ಮತ್ತು ದೈವ ನಿರ್ಲಕ್ಷಿಸಿದರೆ ಕುರುಬರಿಗೆ ಭವಿಷ್ಯವಿಲ್ಲ ಎಂದು ಎಚ್ಚರಿಸಿದರು.
ಭಾರತೀಯ ಸಂಸ್ಕೃತಿ ತಿಳಿಯಬೇಕಾದರೆ ಕುರುಬರ ಸಂಸ್ಕೃತಿ ತಿಳಿಯಬೇಕು ಎಂದು ಖ್ಯಾತ ವಿದ್ವಾಂಸ ಶಂಭಾ ಜೋಷಿ ದಾಖಲಿಸಿದ್ದಾರೆ. ಕುರುಬರ ಹಿಂದಿನ ಗೃಹ ಪ್ರವೇಶ ಪದ್ದತಿ ಮರೆತು ಹೋಗಿ, ಪುರೋಹಿತರ ಪದ್ಧತಿ ಆರಂಭವಾಗಿದೆ. ಬೀರೇಶ್ವರ ಮನೆ ಪ್ರವೇಶಿಸಿದರೆ ಯಾವ ಹೋಮ, ಹವನ ಬೇಕಾಗಿಲ್ಲ. ಬೀರೇಶ್ವರ ಸತ್ಯ ದೈವವಾಗಿದ್ದು, ಅಪಾರ ಮಹಿಮೆ ಹೊಂದಿದ್ದಾರೆ ಎಂದು ತಿಳಿ ಹೇಳಿದರು.
ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಜೆ.ಸಿ. ನಿಂಗಪ್ಪ, ಮಾಯಕೊಂಡ ವೆಂಕಟೇಶ್, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ದಿಳ್ಳೆಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಕೊಳೇನಹಳ್ಳಿ ಸತೀಶ್, ಮುಖಂಡ ಬಿ.ಟಿ. ಹನುಮಂತಪ್ಪ, ಜಿ. ಮಲ್ಲಿಕಾರ್ಜುನಪ್ಪ, ರಾಮಗೊಂಡನಹಳ್ಳಿ ಮಹೇಂದ್ರ, ಅಣಬೇರು ಶಿವಮೂರ್ತಿ, ಗೌಡ್ರ ನಟರಾಜ, ರಾಮಣ್ಣ ಮತ್ತಿತರರು ಇದ್ದರು.