ಸ್ನಾತಕೋತ್ತರ ವಿದ್ಯಾರ್ಥಿಕೂಟ ಉದ್ಘಾಟನೆಯಲ್ಲಿ ಎಸ್ಪಿ ಉಮಾ ಪ್ರಶಾಂತ್
ದಾವಣಗೆರೆ, ಜ. 23- ವಿಶ್ವವಿದ್ಯಾಲಯದಿಂದ ಮೌಲ್ಯಾಧಾರಿತ ಶಿಕ್ಷಣ ದೊರೆಯುತ್ತಿದ್ದು, ಪ್ರತಿ ವಿದ್ಯಾರ್ಥಿಯುವ ಉತ್ತಮ ಪ್ರಜೆಯಾಗಿ, ನಾಯಕತ್ವ ಗುಣ ಬೆಳೆಸಿಕೊಂಡು ಉತ್ತಮ ಸಮಾಜ ನಿರ್ಮಾಣ ಮಾಡಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಹೇಳಿದರು.
ದಾವಣಗೆರೆ ವಿಶ್ವ ವಿದ್ಯಾನಿಲಯದಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಕೂಟ ಉದ್ಘಾಟಿಸಿ ಅವರು ಮಾತನಾಡಿದರು. ನಾಯಕತ್ವ ಗುಣ ಪ್ರತಿ ವಿದ್ಯಾರ್ಥಿ ಯಲ್ಲಿ ಇರುತ್ತದೆ. ಅದನ್ನು ಜಾಗೃತಗೊಳಿಸುವ ಕೆಲಸ ನಿಮ್ಮದಾಗಿರುತ್ತದೆ. ನಾಯಕತ್ವ ಗುಣದಿಂದ ಎಂತಹ ಸನ್ನಿವೇಶ, ಸಂದರ್ಭಗಳು ಬಂದರೂ ಎದುರಿಸಿ ಮುನ್ನಡೆಯಬಹುದು ಎಂದರು.
ಇಂದು ಪ್ರತಿ ದಿನ ವಿಜ್ಞಾನ-ತಂತ್ರಜ್ಞಾನ ಬೆಳೆಯುತ್ತಿದ್ದು, ಈ ವೇಗದೊಂದಿಗೆ ನಾವು ಹೊಂದಿಕೊಂಡು ಬೆಳೆಯಬೇಕಿದೆ. ಮೋಬೈಲ್ ಬಳಕೆಯನ್ನು ಉತ್ತಮವಾಗಿ ಬಳಸಿಕೊಳ್ಳುವುದರ ಜೊತೆಗೆ ಪ್ರತಿಯೊಬ್ಬರು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು. ಪ್ರಸ್ತುತ ಸೈಬರ್ ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ. ದುರಾಸೆಗೆ ಬಿದ್ದು ವಿದ್ಯಾವಂತರು, ಪ್ರಜ್ಞಾವಂತರು ಸೈಬರ್ ಕಳ್ಳರ ಜಾಲದಲ್ಲಿ ಬಿದ್ದು ಲಕ್ಷಾಂತರ ರೂಪಾಯಿ ಹಣ ಕಳೆದುಕೊಳ್ಳುತ್ತಿದ್ದಾರೆ.
ಯುವತಿಯರು ತಮ್ಮ ವೈಯಕ್ತಿಕ ಪೋಟೋ ಅಥವಾ ಮಾಹಿತಿಯನ್ನು ಸಾಮಾಜಿಕ ಜಾಲತಾಣ ಸೇರಿದಂತೆ ವೆಬ್ ಸೈಟ್‍ಗಳಲ್ಲಿ ಹಂಚಿಕೊಳ್ಳುವ ಮುನ್ನ ಎಚ್ಚರವಹಿಸಬೇಕು. ಯುವ ಜನತೆ ಡ್ರಗ್ಸ್ ಜಾಲಕ್ಕೆ ಬಲಿಯಾಗುತ್ತಿದ್ದಾರೆ. ಇದು ಅಪಾಯಕಾರಿ ಬೆಳವಣಿಗೆಯಾಗಿದೆ. ಇದು ನಿಮ್ಮ ಕುಟುಂಬ ಮತ್ತು ವೈಯಕ್ತಿಕ ಜೀವನವನ್ನು ಸಂಪೂರ್ಣ ನಾಶಪಡಿಸುತ್ತದೆ. ನೀವು ಸಕಾರಾತ್ಮಕವಾಗಿ ಚಿಂತನೆ ಮಾಡಿ, ನಿರುದ್ಯೋಗದ ಬಗ್ಗೆ ಆಲೋಚನೆ ಬೇಡ. ನಿಮ್ಮ ಕೌಶಲ್ಯತೆಗೆ ತಕ್ಕಂತೆ ಸಾಧನೆ ಮಾಡಲು ಹಲವು ಮಾರ್ಗಗಳಿವೆ. ಸಾಮಾಜಿಕ ಜವಾಬ್ದಾರಿ ಪ್ರತಿಯೊಬ್ಬ ಭಾರತೀಯ ಪ್ರಜೆ ಮೇಲಿದೆ, ಈ ನಿಟ್ಟಿನಲ್ಲಿ ಉತ್ತಮ ನಾಗರಿಕರಾಗಿ ಸಮಾಜ ಸೇವೆಯಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಪ್ರೋ. ಬಿ. ಡಿ. ಕುಂಬಾರ ಶೈಕ್ಷಣಿಕ ಅಧ್ಯಯನದ ಜೊತೆಗೆ ಕ್ರೀಡೆ, ಇನ್ನಿತರೆ ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಆಸಕ್ತಿಯಿಂದ ಭಾಗವಹಿಸಿ ಸಮಗ್ರ ವ್ಯಕ್ತಿತ್ವದ ಬೆಳವಣಿಗೆಗೆ ಆದ್ಯತೆ ನೀಡಬೇಕು. ಈ ವಿದ್ಯಾರ್ಥಿ ಒಕ್ಕೂಟದಲ್ಲಿ ಎಲ್ಲರೂ ಭಾಗಿಯಾಗಬೇಕು. ಇನ್ನೂ ಯುವ ಜನ ಮಹೋತ್ಸವ ಸೇರಿದಂತೆ ಮುಂದಿನ ವಿವಿಧ ಸ್ಪರ್ಧೆಗಳಿಗೆ ಈಗಿನಿಂದಲೇ ತಯಾರಿ ನಡೆಸಬೇಕಿದೆ. ತಯಾರಿ ಹೇಗಿರಬೇಕು ಎಂದರೆ ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈಯ್ಯುವಂತಿರಬೇಕು, ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಶ್ರಮ ವಹಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಪ್ರೋ. ಆರ್. ಶಶಿಧರ್, ಪ್ರೋ. ಮಹಾಬಲೇಶ್ವರ, ಯು. ಎಸ್. ಪ್ರೊ .ವೆಂಕಟ್‍ರಾವ್ ಪಲ್ಲಾಟೆ, ಪ್ರೋ. ರವಿಕುಮಾರ್ ಪಾಟೀಲ್, ಡಾ. ಜೋಗಿನಕಟ್ಟೆ ಮಂಜುನಾಥ್, ಡಾ. ಶಶಿಕಲಾ ಯಾಳಗಿ, ಪವಿತ್ರ ಇದ್ದರು.