ದಾವಣಗೆರೆ, ಜ. 23 – ಅಯೋಧ್ಯೆ ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆಯ ದಿನದಂದು ರಾಜ್ಯ ಸರ್ಕಾರ ರಜೆ ಘೋಷಣೆ ಮಾಡದೇ ಇರುವುದನ್ನು ಸಮರ್ಥಿಸಿಕೊಂಡಿರುವ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಕಾಯಕವೇ ಕೈಲಾಸ ಎಂದು ಬಸವಣ್ಣನವರು ಹೇಳಿದ್ದಾರೆ. ನಾವು ಕಾಯಕದಲ್ಲಿ ಭಗವಂತನ ನೆನೆಯುತ್ತೇವೆ ಎಂದರು.
ನಗರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಎಲ್ಲೆಡೆ ರಾಮ ಇದ್ದಾನೆ. ಎಲ್ಲೆಡೆ ಭಗವಂತ ಇದ್ದಾನೆ. ಇಂತಹ ವಿಷಯಗಳಲ್ಲಿ ರಾಜಕೀಯ ಮಾಡುವ ದರಿದ್ರ ಪರಿಸ್ಥಿತಿ ಕಾಂಗ್ರೆಸ್ಗೆ ಬಂದಿಲ್ಲ. ನಮಗೂ ಭಕ್ತಿ ಭಾವನೆಗಳಿವೆ ಎಂದರು. ನಾನು ವೈಯಕ್ತಿಕವಾಗಿ 103 ಮಂದಿರಗಳನ್ನು ಜೀರ್ಣೋದ್ಧಾರ ಮಾಡಿದ್ದೇನೆ. ಇದರಲ್ಲಿ ಐದು ರಾಮ ಮಂದಿರಗಳೂ ಇವೆ. ಮುಂಬರುವ ದಿನಗಳಲ್ಲಿ ನಾನು ಅಯೋಧ್ಯೆ ಮಂದಿರಕ್ಕೆ ತೆರಳುತ್ತೇನೆ ಎಂದೂ ಹೆಬ್ಬಾಳ್ಕರ್ ತಿಳಿಸಿದರು.