ಶಿವಕುಮಾರ ಶ್ರೀ ಧೃವತಾರೆಯಂತೆ

ಶಿವಕುಮಾರ ಶ್ರೀ ಧೃವತಾರೆಯಂತೆ

ಕೃಷಿ ಕಾಯಕ ಯೋಗಿ ಶ್ರೀ ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ಬಣ್ಣನೆ

ದಾವಣಗೆರೆ, ಜ. 23 – ಸ್ವಾಮೀಜಿಗಳು ಸಾಕಷ್ಟ ಜನ ಇರಬಹುದು. ಆದರೆ, ಸಿದ್ದಗಂಗಾದ ಲಿಂಗೈಕ್ಯ ಶ್ರೀ ಶಿವಕುಮಾರ ಸ್ವಾಮೀಜಿ ಅವರು, ಸ್ವಾಮೀಜಿಗಳಲ್ಲೇ ಧ್ರುವತಾರೆಯಂತೆ  ಎಂದು ನಂದಿಪುರದ ಕೃಷಿ ಕಾಯಕ ಯೋಗಿ ಶ್ರೀ ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಇಲ್ಲಿನ ವಿನೋಬನಗರದಲ್ಲಿ ಸಿದ್ದಗಂಗಾ ಗೆಳೆಯರ ಬಳಗದಿಂದ ನಿನ್ನೆ ಆಯೋಜಿಸಲಾಗಿದ್ದ ಸಿದ್ದಗಂಗಾದ ಲಿಂ. ಶ್ರೀ ಶಿವಕುಮಾರ ಸ್ವಾಮೀಜಿಯವರ ಐದನೇ ವರ್ಷದ ಸ್ಮರಣೋತ್ಸವ ಹಾಗೂ ದಾಸೋಹ ದಿನದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಶ್ರೀ ಶಿವಕುಮಾರ ಸ್ವಾಮೀಜಿ ಅವರು ಸಿದ್ದಗಂಗಾ ಪೀಠಕ್ಕೆ ಬಂದಾಗ ಮಠದ ಶಾಲೆಗಳಲ್ಲಿ ಕೆಲವೇ ವಿದ್ಯಾರ್ಥಿ ಗಳಿದ್ದರು. ಆಗ ಸ್ವಾಮೀಜಿಗಳು ಗ್ರಾಮಗಳಿಗೆ ತೆರಳಿ ಕಂತೆ ಭಿಕ್ಷೆ ಕೇಳುವ ಪದ್ಧತಿ ಇತ್ತು. ಸಿದ್ದಗಂಗಾ ಶ್ರೀಗಳು ಗ್ರಾಮಗಳಿಗೆ ತೆರಳಿ ಕಂತೆ ಭಿಕ್ಷೆ ಕೇಳಲಿಲ್ಲ, ಮಕ್ಕಳನ್ನು ಮಠಕ್ಕೆ ಕಳಿಸಿ ತಾವು ಅವರ ಕಾಳಜಿ ವಹಿಸುತ್ತೇವೆ ಎಂದು ಹೇಳಿದರು ಎಂದು ಶ್ರೀ ಮಹೇಶ್ವರ ಸ್ವಾಮೀಜಿ ಹೇಳಿದರು.

ಕಣ್ಣಿಲ್ಲದವರು, ಬುದ್ಧಿಮಾಂಧ್ಯರು ಮತ್ತಿತರೆ ಮಕ್ಕಳನ್ನು ತಮ್ಮ ಜೋಳಿಗೆಗೆ ಹಾಕಿ ಎಂದು ಕೇಳಿಕೊಂಡು, ಅಂಥವರನ್ನು ಮಠಕ್ಕೆ ಕರೆದುಕೊಂಡು ಬಂದು ಸಲಹಿದರು. ಇಂತಹ ಗುಣದಿಂದಾಗಿಯೇ ಸಿದ್ದಗಂಗಾ ಶ್ರೀಗಳು ನಡೆದಾಡುವ ದೇವರು ಎಂದು ಬಣ್ಣಿಸುತ್ತೇವೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕೆ. ಮಂಜುನಾಥ್, ಶಿಕ್ಷಣ, ವಸತಿ ಹಾಗೂ ದಾಸೋಹದ ಮೂಲಕ ಶ್ರೀ ಶಿವಕುಮಾರ ಸ್ವಾಮೀಜಿ ನಿಸ್ವಾರ್ಥ ಸೇವೆ ಸಲ್ಲಿಸಿದ್ದರು. ಇದರಿಂದಾಗಿ ಅವರನ್ನು ತ್ರಿವಿಧ ದಾಸೋಹಿ ಎಂದು ಬಣ್ಣಿಸುತ್ತೇವೆ ಎಂದರು.

ಇದೇ ವೇಳೆ ಮಕ್ಕಳಿಗೆ ವೇಷ ಭೂಷಣ ಪ್ರದರ್ಶನ, ವೀರಗಾಸೆ ಹಾಗೂ ರಕ್ತದಾನ ಆಯೋಜಿಸಲಾಗಿತ್ತು. ಸಾಧನಾಶ್ರಮದ ಪುಷ್ಪ ಅವರಿಗೆ ಗೌರವ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ನಟ ಹಾಗೂ ವಾಗ್ಮಿ ಡಾ. ಚಿಕ್ಕಹೆಜ್ಜಾಜೆ ಮಹಾದೇವ್, ಜ್ಯೂನಿಯರ್ ರಾಜ್‌ಕುಮಾರ್ ಎಂದು ಹೆಸರಾಗಿರುವ ಆರ್. ನಾರಾಯಣಪ್ಪ, ಸಿದ್ದಗಂಗಾ ಗೆಳೆಯರ ಬಳಗದ ಅಧ್ಯಕ್ಷ ಶಿವಪ್ರಕಾಶ್ ಕರ್ಜಗಿ ಮತ್ತಿತರರು ಉಪಸ್ಥಿತರಿದ್ದರು.

ಇಂಪನಾ ಪ್ರಾರ್ಥಿಸಿದರೆ, ಆಶಾ ಮೇಘರಾಜ್ ಸ್ವಾಗತಿಸಿದರು. 

error: Content is protected !!