ದಾವಣಗೆರೆ, ಜ. 22- ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ಹಾಗೂ ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ನಗರದ 24 ನೇ ವಾರ್ಡ್, ಎಂ.ಸಿ.ಸಿ ಎ ಬ್ಲಾಕ್, ಬೂದೇಶ್ವರ ಸ್ವಾಮಿ ದೇವಸ್ಥಾನದ ಬಳಿ ನಾಲ್ಕು ಎತ್ತುಗಳಿಗೆ ರಾಮ, ಲಕ್ಷ್ಮಣ, ಆಂಜನೇಯ, ಜಟಾಯು ಎಂದು ಹೆಸರಿಟ್ಟು ಸ್ಮರಿಸುತ್ತಾ ಅವುಗಳಿಗೆ ಅಕ್ಕಿ, ಬೆಲ್ಲ ತಿನ್ನಿಸುವ ಮೂಲಕ ವಿಶೇಷ ಪೂಜೆ ಸಲ್ಲಿಸಿದ ವಿಧಾನ ಪರಿಷತ್ ಮುಖ್ಯ ಸಚೇತಕರೊಂದಿಗೆ, ಪಾಲಿಕೆ ವಿರೋಧ ಪಕ್ಷದ ನಾಯಕ ಪ್ರಸನ್ನ ಕುಮಾರ್, ಮಾಜಿ ಮೇಯರ್ ಸುಧಾ ಜಯರುದ್ರೇಶ್ ಪೂಜೆ ಸಲ್ಲಿಸಿದರು.
ಆನಂತರ ಅಲ್ಲಿ ಸೇರಿದ ನೂರಾರು ಭಕ್ತರು ರಾಮ ನಾಮ ಜಪಿಸುತ್ತಾ, ಎಲ್‌ಇಡಿ ಮೂಲಕ ಪ್ರಾಣ ಪ್ರತಿಷ್ಠಾಪನಾ ಸಮಾರಂಭದ ನೇರ ಪ್ರಸಾರವನ್ನು ಸಾರ್ವಜನಿಕರೆಲ್ಲರೂ ಸೇರಿ, ವಾರ್ಡಿನ ಪ್ರಮುಖರ ಸಮ್ಮುಖದಲ್ಲಿ ಸಾಮೂಹಿಕವಾಗಿ ವೀಕ್ಷಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ರವಿಕುಮಾರ್, ಇಂದು ರಾಮಮಂದಿರದಲ್ಲಿ ಮೂರ್ತಿ ಪ್ರತಿಷ್ಠಾಪನೆಯ ಅತ್ಯಂತ ಪವಿತ್ರ ದಿನ, ರೈತ ದೇಶದ ಬೆನ್ನೆಲುಬು, ಈ ಎತ್ತುಗಳು ರೈತನ ಬೆನ್ನೆಲುಬು, ಭವಂತನ ಸ್ವರೂಪವಾಗಿರುವ ಈ ಎತ್ತುಗಳಿಗೆ ರಾಮ, ಲಕ್ಷ್ಮಣ, ಆಂಜನೇಯ, ಜಟಾಯು ಎಂದು ಹೆಸರಿನಲ್ಲಿ ಸ್ಮರಿಸುತ್ತಾ, ಪುರುಷೋತ್ತಮನ ಗುಣ, ಲಕ್ಷ್ಮಣನಂತಹ ಭ್ರಾತೃತ್ವ, ಆಂಜನೆಯನಂತಹ ಭಕ್ತಿ, ಜಟಾಯುನಂತೆ ಬಲಿದಾನದ ಪ್ರೇರಣೆ ನಮಗೆ ಸದಾ ನೀಡಲಿ ಎಂದು ಪ್ರಾರ್ಥಿಸಿದರು.
ಪ್ರಭು ಶ್ರೀ ರಾಮನ ಹೆಸರಿನಲ್ಲಿ ಎಷ್ಟು ಶಕ್ತಿ ಇದೆ ಎಂದರೆ, ಇಂದು ಗಲ್ಲಿ ಗಲ್ಲಿಗಳಲ್ಲಿಯೂ ಸ್ವಯಂ ಪ್ರೇರಣೆಯಿಂದ ಪ್ರಭುವಿನ ಆರಾಧನೆ ನಡೆಸಿ, ಅನ್ನ ಸಂತರ್ಪಣೆ ಮಾಡುತ್ತಾ, ಧ್ವಜಗಳನ್ನು ಕಟ್ಟಿದ್ದಾರೆ. ಒಂದು ರೀತಿ ದೇಶದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. 500 ವರ್ಷದ ಸಂಘರ್ಷ ಮತ್ತು ಕನಸು ಸಾಕಾರಗೊಂಡಿದೆ.
ಈ ಸಂದರ್ಭದಲ್ಲಿ ನಗರ ಸಂಘಚಾಲಕರಾದ ಜಯರುದ್ರೇಶ್, ಡಾ. ಶಿವಯೋಗ ಸ್ವಾಮಿ, ಪದ್ಮನಾಭ ಶೆಟ್ರು, ಕಿರಣ್, ಸಚಿನ್ ವೆರ್ಣೇಕರ್, ಶಂಕರ್, ಸುನೀಲ್ ಉಪಸ್ಥಿತರಿದ್ದರು.