ಹರಿಹರ, ಜ. 22 – ನಗರದ ಆಕಾರ ಆಧಾರ್ ಚಿತ್ರಕಲೆ ಕೇಂದ್ರದ ಎಂ. ರಾಮುರವರ ತಂಡವು ನಾಣ್ಯಗಳ ಮೂಲಕ ರಾಮ ಮಂದಿರ ನಿರ್ಮಾಣ ಮಾಡಿದ್ದಾರೆ.
ಈ ವೇಳೆ ಆಕಾರ್ ಆಧಾರ್ ಚಿತ್ರಕಲೆ ಮುಖ್ಯಸ್ಥ ಎಂ. ರಾಮು ಮಾತನಾಡಿ, ನಮ್ಮ ಸಂಪ್ರದಾಯವನ್ನು ಉಳಿಸಿ ಬೆಳೆಸುವುದರ ಜೊತೆಗೆ ಮಕ್ಕಳಲ್ಲಿ ಇರುವಂತಹ ಪ್ರತಿಭೆಯನ್ನು ಹೊರಗಡೆ ತರಬೇಕು ಎಂಬ ಉದ್ದೇಶವನ್ನು ಇಟ್ಟುಕೊಂಡು ನಾಣ್ಯಗಳ ಮೂಲಕ ರಾಮ ಮಂದಿರವನ್ನು ನಿರ್ಮಾಣ ಮಾಡಲಾಗಿದೆ ಎಂದು ಹೇಳಿದರು.
35 ಸಾವಿರ ರೂಪಾಯಿ ವೆಚ್ಚದಲ್ಲಿ ರಾಮಮಂದಿರದ ನಿರ್ಮಾಣ ಮಾಡಲಾಗಿದೆ. 10 ಪೈಸೆ, 25 ಪೈಸೆ, 50 ಪೈಸೆ, 5 ರೂಪಾಯಿ, 10 ರೂಪಾಯಿ ಮೌಲ್ಯದ 31 ಸಾವಿರ ರೂಪಾಯಿ ನಾಣ್ಯಗಳನ್ನು ಬಳಕೆ ಮಾಡಲಾಗಿದೆ. ಒಂದೂವರೆ ಅಡಿ ಎತ್ತರ, 4 ಅಡಿ ಅಗಲ, 3 ಅಡಿ ಉದ್ದ ಇದ್ದು, ಕಳೆದ ಮೂರು ದಿನಗಳಿಂದ 19 ವಿದ್ಯಾರ್ಥಿಗಳು ನಿರ್ಮಾಣ ಮಾಡುವುದಕ್ಕೆ ಶ್ರಮಿಸಿದ್ದಾರೆ ಇದರ ಜೊತೆಯಲ್ಲಿ ಹಲವಾರು ಪ್ರದರ್ಶನದ ಕಲಾಕೃತಿಗಳು ರಂಗೋಲಿ ಕಲೆ ಪ್ರದರ್ಶನವನ್ನು ಮಾಡಲಾಗಿದೆ. ನಾಣ್ಯಗಳಿಂದ ತಯಾರಿಸಿರುವ ರಾಮಮಂದಿರವನ್ನು ಹುಬ್ಬಳ್ಳಿ ನಗರದಲ್ಲಿ ಆರ್ಟ್ ಗ್ಯಾಲರಿಯಲ್ಲಿ ಪ್ರದರ್ಶನಕ್ಕೆ ಇಡಲಾಗುತ್ತದೆ. ತದನಂತರ ಹುಬ್ಬಳ್ಳಿ ಮೂಲಕ ಅಯೋಧ್ಯೆಯ ರಾಮ ಮಂದಿರಕ್ಕೆ ಕಳಿಸಿಕೊಡಲಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸೌಮ್ಯ, ರಾಮು, ನಿವೃತ್ತ ಸೈನಿಕ ಪ್ರಕಾಶ್, ಕೆ. ಸಿದ್ದೇಶ್ ಇತರರು ಹಾಜರಿದ್ದರು.