ಕಾನೂನು ಪಾಲನೆ ಎಲ್ಲರ ಕರ್ತವ್ಯ

ಕಾನೂನು ಪಾಲನೆ ಎಲ್ಲರ ಕರ್ತವ್ಯ

ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದಲ್ಲಿ ಸಿವಿಲ್ ನ್ಯಾಯಾಧೀಶರಾದ   ಮಹಾವೀರ ಮ. ಕರೆಣ್ಣವರ್

ದಾವಣಗೆರೆ, ಜ.18-  ಕಾನೂನು ಎಲ್ಲರಿಗೂ ಒಂದೇ, ಯಾರೇ ವಾಹನಗಳನ್ನು ಚಾಲನೆ ಮಾಡಿದರೂ ಪ್ರತಿಯೊಬ್ಬರು ಮೋಟಾರು ವಾಹನ ಕಾಯಿದೆ ಪಾಲನೆ ಮಾಡಬೇಕಾದುದು ಆದ್ಯಕರ್ತವ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ   ಮಹಾವೀರ ಮ. ಕರೆಣ್ಣವರ್ ತಿಳಿಸಿದರು.

ನಗರದ ಆರ್‌ಟಿಓ ಕಚೇರಿಯ ಸಭಾಂಗಣದಲ್ಲಿ ಸಾರಿಗೆ ಇಲಾಖೆ, ಪೊಲೀಸ್ ಇಲಾಖೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ಜಿಲ್ಲಾ ವಕೀಲರ ಸಂಘ  ಇವರ ಸಹಯೋಗದೊಂದಿಗೆ ನಿನ್ನೆ ಆಯೋಜಿಸಲಾಗಿದ್ದ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ 2024ರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಯಾರೇ, ಯಾವುದೇ ವಾಹನಗಳನ್ನು ಬಳಕೆ ಮಾಡಲಿ, ಬಳಕೆ ಜತೆ ಕಾನೂನು, ಕಾಯಿದೆಗಳನ್ನು ತಿಳಿದುಕೊಳ್ಳುವುದು ಅಗತ್ಯ. ಒಂದು ವೇಳೆ ನಮಗೆ ಕಾನೂನು ಗೊತ್ತಿಲ್ಲ ಎನ್ನುವ ನಿರ್ಲಕ್ಷ್ಯ ಮಾತುಗಳಿಗೆ ಅವಕಾಶ ಇರುವುದಿಲ್ಲ ಎಂದು ಹೇಳಿದರು. ಕಾನೂನು ಉಲ್ಲಂಘನೆ ಮಾಡಿದರೆ ಕ್ರಮ ಅನಿವಾರ್ಯ. ಕಾನೂನು ಬಿಟ್ಟು ಏನು ಮಾಡಲು ಸಾಧ್ಯವಿಲ್ಲ. ಕಾನೂನು ಯಾರನ್ನೂ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಎಚ್. ಅರುಣ್ ಕುಮಾರ್ ಮಾತನಾಡಿ, ಎಲ್ಲಾ ಭಾರೀ ವಾಹನ ಚಾಲಕರು, ವಾಹನ ತರಬೇತಿ ಚಾಲನ ಕೇಂದ್ರಗಳು, ಎಲ್ಲಾ ಇಲಾಖೆಗಳನ್ನು ಒಳಗೊಂಡಂತೆ ಕಾರ್ಯಕ್ರಮ ಆಯೋಜಿಸುತ್ತಿರುವುದು ಮಾದರಿ. ರಸ್ತೆ ಸುರಕ್ಷತಾ ಸಪ್ತಾಹ ಸಂದರ್ಭದಲ್ಲಿ ನಾವು ಕೇವಲ ವಾಹನ ಚಾಲನೆ ಮಾಡುವವರ ಕುರಿತು ಮತ್ತು ಕಾನೂನು ಉಲ್ಲಂಘನೆ ಕುರಿತು ಜಾಗೃತಿ ಮೂಡಿಸಿದರೆ ಸಾಕಾಗುವುದಿಲ್ಲ. ರಸ್ತೆಗಳ ಸುರಕ್ಷತೆ ಕಡೆಗೂ ಹೆಚ್ಚು ಗಮನ ಕೊಡಬೇಕಾಗಿದೆ. ಅವೈಜ್ಞಾನಿಕ ರಸ್ತೆ ತಡೆ, ಗುಂಡಿ ಬಿದ್ದ ರಸ್ತೆಗಳು, ರಿಪೇರಿಯಾಗದ ರಸ್ತೆಗಳಿಂದ ವಾಹನಗಳ ಅಪಘಾತಗಳು ಹೆಚ್ಚಾಗಿ ಸಂಭವಿಸುತ್ತಿವೆ. ಇದರ ಕಡೆಗೂ ಇಲಾಖೆಗಳು ಹೆಚ್ಚಿನ ಗಮನ ಹರಿಸಬೇಕು. ಪ್ರತಿಷ್ಠಿತ ಬಡಾವಣೆಗಳಲ್ಲಿ ತ್ರಿಬಲ್ ರೈಡಿಂಗ್ ಸೇರಿದಂತೆ ಕಾನೂನು ಉಲ್ಲಂಘನೆ ಆಗುತ್ತಿರುವುದು ಕಂಡುಬರುತ್ತಿದೆ. ಇದರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿದ್ದು, ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಗಮನ ಹರಿಸಬೇಕು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಮೋಟಾರು ವಾಹನ ನಿರೀಕ್ಷಕ ಮಹಮ್ಮದ್ ಖಾಲಿದ್, ಯಾವುದೇ ವಾಹನ   ಯಾರೇ ಚಾಲನೆ ಮಾಡಲಿ ಅವರು ಕಡ್ಡಾಯವಾಗಿ ವಾಹನ ಚಾಲನಾ ಕಾನೂನನ್ನು ಪಾಲನೆ ಮಾಡಬೇಕು. ಯಂತ್ರದೊಂದಿಗೆ ಮಾನವ ಕೆಲಸ ಮಾಡಬೇಕಿದೆ. ತಂತ್ರಜ್ಞಾನ ಮುಂದುವರೆದಂತೆ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ವಾಹನಗಳನ್ನು ನಿರ್ಮಾಣ ಮಾಡಲಾಗುತ್ತದೆ. ಅದಕ್ಕೆ ತಕ್ಕಂತೆ ವಾಹನ ಸವಾರರು ತಮ್ಮ  ಸ್ಥಿತಿಗತಿಗಳನ್ನು ಬದಲಾವಣೆ ಮಾಡಿಕೊಳ್ಳಬೇಕೆಂದು ಸಲಹೆ ನೀಡಿದರು.

ಪ್ರಾದೇಶಿಕ ಸಾರಿಗೆ ಅಧಿಕಾರಿ ಪ್ರಮಥೇಶ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಆರ್‍ಟಿಓ ಇಲಾಖೆಯ ಅಧೀಕ್ಷಕ ಶಶಿಧರ್, ತಿಪ್ಪೇಶ್, ವೀರೇಶ್, ಸುರೇಶ್ ಇತರರು ಇದ್ದರು.

error: Content is protected !!