ನಿರ್ಲಕ್ಷ್ಯಕ್ಕೊಳಗಾದ ಕನ್ನಡದ ಕಟ್ಟಾಳು ಪಾಟೀಲ್ ಪುಟ್ಟಪ್ಪ ಸಮಾಧಿ

ನಿರ್ಲಕ್ಷ್ಯಕ್ಕೊಳಗಾದ ಕನ್ನಡದ ಕಟ್ಟಾಳು ಪಾಟೀಲ್ ಪುಟ್ಟಪ್ಪ ಸಮಾಧಿ

ರಾಣೇಬೆನ್ನೂರು, ಜ.16- ಕನ್ನಡನಾಡು ಕಂಡ ಅಪ್ರತಿಮ ಕನ್ನಡ ಹೋರಾಟಗಾರ – ಬರಹಗಾರ ಪಾಟೀಲ ಪುಟ್ಟಪ್ಪನವರ ಸಮಾಧಿಯು ಇದುವರೆಗೂ ಅಭಿವೃದ್ಧಿಯನ್ನು ಕಾಣದಿರುವುದು ವಿಷಾದದ ಸಂಗತಿ ಎಂದು ಹರಿಹರ ಎಪಿಎಂಸಿ ಮಾಜಿ ಅಧ್ಯಕ್ಷ ಮಂಜುನಾಥ್ ಪಟೇಲ್, ನೊಳಂಬ ಸಮಾಜದ ಮುಖಂಡ ಮಲೇಬೆನ್ನೂರಿನ ಬಿ ವೀರಯ್ಯ, ಜಿಲ್ಲಾ ಕಸಾಪ ಸಂಘಟನಾ ಕಾರ್ಯದರ್ಶಿ ಜಿಗಳಿ ಪ್ರಕಾಶ್, ಚನ್ನಗಿರಿ ಕಸಾಪ ಅಧ್ಯಕ್ಷ ಎಲ್.ಜಿ.ಮಧುಕುಮಾರ್ ಬೇಸರ ವ್ಯಕ್ತಪಡಿಸಿದರು.

ಇಲ್ಲಿಗೆ ಸಮೀಪದ ಹಲಗೇರಿ ಗ್ರಾಮದಲ್ಲಿರುವ ಪಾಟೀಲ್ ಪುಟ್ಟಪ್ಪನವರ ಸಮಾಧಿ ಸ್ಥಳಕ್ಕೆ ಅವರ ಜನುಮ ದಿನದ ಪ್ರಯುಕ್ತ ಇಂದು ಬೆಳಿಗ್ಗೆ ಭೇಟಿ ನೀಡಿ, ನಮನ ಸಲ್ಲಿಸಿ ಅವರುಗಳು ಮಾತನಾಡಿದರು. 

ಕರ್ನಾಟಕ ಏಕೀಕರಣ ಹಾಗೂ ಗೋಕಾಕ್ ಚಳವಳಿಯ ಪ್ರಮುಖರಾಗಿ, ಕನ್ನಡ ನೆಲ, ಜಲ, ಭಾಷೆಯ ವಿಚಾರವಾಗಿ ತಮ್ಮ ಜೀವಿತದ ಕೊನೆಯವರೆಗೂ ಕನ್ನಡವನ್ನೇ ಜಪಿಸಿ, ನೆಲ-ಜಲ-ಭಾಷೆಗೆ ಧಕ್ಕೆ ಬಂದಾಗಲೆಲ್ಲಾ ತಮ್ಮ ಪ್ರಖರವಾದ, ನೇರವಾದ ನಡೆ-ನುಡಿಗಳಿಂದ ಕನ್ನಡದ ಸಾರಸ್ವತ ಲೋಕವನ್ನು ಹಲವು ಹೋರಾಟಗಳಿಗೆ ಪ್ರೇರೇಪಣೆಗೊಳಿಸಿದ ಕೀರ್ತಿ ಪಾಪುರವರಿಗೆ ಸಲ್ಲುತ್ತದೆ ಎಂದರು.

ನೈರುತ್ಯ ರೈಲ್ವೆ ರಚನೆಯಾಗಲು, ಕನ್ನಡಿಗರಿಗೆ ಮೀಸಲಾತಿಯನ್ನು ನೀಡುವ ವಿಚಾರವಾಗಿ, ಉತ್ತರ ಕರ್ನಾಟಕದ ಅಭಿವೃದ್ಧಿಯ ಹೋರಾಟಗಳಲ್ಲಿ ತಮ್ಮದೇ ಛಾಪನ್ನು ಮೂಡಿಸಿದ್ದ ಪಾಪುರವರು, ಕನ್ನಡದ ಕಟ್ಟಾಳಾಗಿ ತಮ್ಮ ಜೀವವನ್ನೇ ಸವೆಸಿದ್ದರು. ಇವರ ಸಮಾಧಿಯು ಇಂದಿಗೂ ದಿವ್ಯ ನಿರ್ಲಕ್ಷಕ್ಕೆ ಒಳಗಾಗಿರುವುದು ಖಂಡನೀಯ ಎಂದರು.

ಸರ್ಕಾರ ಈಗಲಾದರೂ ಕನ್ನಡದ ಕಟ್ಟಾಳು ಪಾಪು ಸಮಾಧಿಯನ್ನು ಸ್ಮಾರಕದ ರೀತಿಯಲ್ಲಿ ಅಭಿವೃದ್ಧಿ ಪಡಿಸಬೇಕು ಎಂದು ಅವರುಗಳು ಮನವಿ ಮಾಡಿದರು.

ಹರಿಹರ ತಾಲ್ಲೂಕು ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಕುಂಬಳೂರು ವಾಸುದೇವಮೂರ್ತಿ, ಪುರಸಭೆ ಸದಸ್ಯ ಭೋವಿ ಕುಮಾರ್ ಮತ್ತಿತರರು ಈ ವೇಳೆ ಹಾಜರಿದ್ದರು.

error: Content is protected !!