ಹರಪನಹಳ್ಳಿಯಲ್ಲಿನ ಶ್ರೀ ಸಿದ್ದರಾಮೇಶ್ವರರ ಜಯಂತ್ಯೋತ್ಸವದಲ್ಲಿ ಪುರಸಭೆ ಹಿರಿಯ ಸದಸ್ಯ ಎಂ.ವಿ. ಅಂಜಿನಪ್ಪ
ಹರಪನಹಳ್ಳಿ, ಜ. 16 – ಸಮಾಜದ ಉದ್ದಾರ ಶಿಕ್ಷಣದಿಂದ ಮಾತ್ರ ಸಾಧ್ಯ, ಹಾಗಾಗಿ ಮಕ್ಕಳ ಕೈಗೆ ಗುದ್ದಲಿ, ಸಲಿಕೆ, ಹಾರೆ, ಕೊಡುವ ಬದಲು ಲೇಖನಿಯನ್ನು ಕೊಡಿ ಎಂದು ಪುರಸಭೆ ಹಿರಿಯ ಸದಸ್ಯ ಎಂ.ವಿ. ಅಂಜಿನಪ್ಪ ಹೇಳಿದರು.
ಪಟ್ಟಣದ ಸಾಮರ್ಥ್ಯಸೌಧ ಸಭಾಂಗಣ ದಲ್ಲಿ ತಾಲ್ಲೂಕು ಆಡಳಿತದ ವತಿಯಿಂದ ಏರ್ಪಡಿಸಿದ್ದ ಶ್ರೀ ಸಿದ್ದರಾಮೇಶ್ವರರ ಜಯಂ ತ್ಯೋತ್ಸವ ಕಾರ್ಯಕ್ರಮದ ಉದ್ಘಾಟನೆ ನೆರ ವೇರಿಸಿದ ಬಳಿಕ ಅವರು ಮಾತನಾಡಿದರು.
ಶಿಕ್ಷಣದಿಂದಲೇ ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನ ರಚಿಸಲು ಸಾಧ್ಯವಾಯಿತು. ಎ.ಪಿ.ಜೆ. ಅಬ್ದುಲ್ ಕಲಾಂ ರವರು ವಿಜ್ಞಾನಿಯಾಗಿ ದೇಶದ ಉನ್ನತ ಹುದ್ದೆ ರಾಷ್ಟ್ರಪತಿ ಸ್ಥಾನವನ್ನು ಅಲಂಕರಿಸಿದರು ಎಂದು ಸ್ಮರಿಸಿದರು.
ಇಂದು ಜಯಂತಿಗಳು ಕೇವಲ ಫೋಟೋ ಇಟ್ಟು, ಪೂಜೆಗೆ ಮಾತ್ರ ಸೀಮಿತವಾಗಿರುವುದು ವಿಷಾದನೀಯ ಎಂದ ಅವರು ಮಹರ್ಷಿ ವಾಲ್ಮೀಕಿ, ಮಾದಾರ ಚನ್ನಯ್ಯ, ಕನಕದಾಸರು, ಬಸವಣ್ಣ ಸೇರಿದಂತೆ ಹಲವು ದಾರ್ಶನಿಕರು ಕೇವಲ ಒಂದು ಜಾತಿಗೆ ಸೀಮಿತರಾದವರಲ್ಲ ಅವರ ಆದರ್ಶ ಜೀವನ ಇಡೀ ಮನುಕುಲಕ್ಕೆ ಮಾದರಿಯಾಗಿದ್ದು, ಇಂದಿನ ಯುವ ಸಮೂಹ ದಾರ್ಶನಿಕರ ಜೀವನ ಸಾಧನೆಗಳನ್ನು ಅಳವಡಿಸಿಕೊಂಡು ಸನ್ಮಾರ್ಗ ದಲ್ಲಿ ನಡೆದು ಉತ್ತಮ ಜೀವನ ಕಟ್ಟಿಕೊಳ್ಳಲಿ ಎಂದರು.
ಸಿದ್ದರಾಮೇಶ್ವರರು ಸುಮಾರು 800 ವರ್ಷಗಳ ಹಿಂದೆಯೇ ರೈತರಿಗೆ ನೀರಾವರಿ ಸೌಲಭ್ಯ, ಪ್ರಾಣಿ, ಪಕ್ಷಿಗಳ ಸಂಕುಲಕ್ಕೆ ಕೆರೆ, ಕಟ್ಟೆಗಳನ್ನು ನಿರ್ಮಿಸಿದ ಮಾಹಾನ್ ಚೇತನ ರಾಗಿದ್ದರು ಎಂದ ಅವರು, ಈ ಸಮುದಾಯ ಸರ್ಕಾರದ ಸೌಲಭ್ಯ ಪಡೆದು ಸಾಮಾಜಿಕ ವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ, ಆರ್ಥಿಕವಾಗಿ ಸಮಾಜದಲ್ಲಿ ಸಬಲರಾಗಬೇಕು ಎಂದರು.
ಮಾಜಿ ಶಾಸಕ ಎಂ.ಪಿ. ರವೀಂದ್ರ ಅವರು ಭೋವಿ ಸಮಾಜಕ್ಕೆ 2 ಎಕರೆ ಭೂಮಿ ಯನ್ನು ನೀಡಿದ್ದರು. ಈಗ ಅವರ ಸಹೋದರಿ ಎಂ.ಪಿ.ಲತಾ ಮಲ್ಲಿಕಾರ್ಜುನ್ ಶಾಸಕರಾಗಿ ದ್ದಾರೆ. ನಮ್ಮ ಸಮಾಜಕ್ಕೆ ಒಂದು ಸುಸಜ್ಜಿತ ಸಮುದಾಯ ಭವನ ನಿರ್ಮಿಸಿ ಕೊಡಬೇಕು ಎಂದು ಅವರು ಮನವಿ ಮಾಡಿದರು.
ಕಲ್ಲು ಒಡೆಯುವುದು, ಮಣ್ಣು ತೆಗೆಯುವುದು ನಮ್ಮ ಸಮಾಜದ ಮೂಲ ವೃತ್ತಿಯಾಗಿದ್ದು, ಅವರಿಗೆ ಕಂದಾಯ ಇಲಾಖೆಯಿಂದ 1 ಅಥವಾ 2 ಎಕರೆ ಭೂಮಿ ಕೊಟ್ಟು ಸಹಕರಿಸಬೇಕು ಎಂದು ತಹಶೀಲ್ದಾರ್ ಜಿ.ವಿ. ಗಿರೀಶ್ ಬಾಬು ಅವರಿಗೆ ಮನವಿ ಮಾಡಿದರು. ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಮನೆ ಇಲ್ಲದವರಿಗೆ ಮನೆಗಳನ್ನು ಕೊಡುವುದರ ಮೂಲಕ ಸೂರು ಕಲ್ಪಿಸುವಂತೆ ತಾಪಂ ಇಓ ಕೆ.ಆರ್. ಪ್ರಕಾಶ್ ಅವರಿಗೆ ಮನವಿ ಮಾಡಿದರು.
ಪ್ರಗತಿಪರ ಚಿಂತಕ, ಸಾಹಿತಿ ಇಸ್ಮಾಯಿಲ್ ಎಲಿಗಾರ ಮಾತನಾಡಿ, 12ನೇ ಶತಮಾನದಲ್ಲಿ ಶರಣರ ಪರಂಪರೆಯಲ್ಲಿ ಮಹಾಮನೆಯಲ್ಲಿ ಜಾತಿ ಭೇದವೆನ್ನದೆ ತಮ್ಮದೇಯಾದ ವಚನ ಗಳ ಮೂಲಕ ಕಾಯಕದಲ್ಲಿ ತೊಡಗಿದ್ದರು. ಎಂದ ಅವರು, ದಾರ್ಶನಿಕರನ್ನು ಜಾತಿಗಳ ಜೈಲಿನಲ್ಲಿ ಬಂಧಿಸಿದ್ದು, ಅದರಿಂದ ಬಿಡುಗಡೆ ಮಾಡಿ, ಮೌಢ್ಯತೆಯಿಂದ ಹೊರಬಂದು, ಶಿಕ್ಷಣ ಪಡೆದು ಸಮಾನತೆಯನ್ನು ಎತ್ತಿಹಿಡಿ ಯುವ ಕೆಲಸ ಮಾಡಬೇಕು ಎಂದರು.
ಆಯ್ಕೆ ಶ್ರೇಣಿ ಉಪನ್ಯಾಸಕ ತಿರುಮಲೇಶ್ ತಿಮ್ಮಪ್ಪನವರು ವಿಶೇಷ ಉಪನ್ಯಾಸ ನೀಡಿದರು. ತಹಶೀಲ್ದಾರ್ ಗಿರೀಶಬಾಬು ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ತಾ.ಪಂ. ಇಓ ಕೆ.ಆರ್. ಪ್ರಕಾಶ್, ಭೋವಿ ಸಮುದಾಯದ ತಾಲ್ಲೂಕು ಅಧ್ಯಕ್ಷ ಎಂ.ಬಿ. ಅಂಜಿನಪ್ಪ, ಪುರಸಭೆ ಸದಸ್ಯರಾದ ಲಾಟಿ ದಾದಾಪೀರ್, ಉದ್ದಾರ ಗಣೇಶ, ವಕೀಲ ವೆಂಕಟೇಶ್, ಗೊಂಗಡಿ ನಾಗರಾಜ, ವಸಂತಪ್ಪ, ಶಂಕರ, ದೈಹಿಕ ಶಿಕ್ಷಕ ದೇವರಾಜ, ಬೆಂಡಿಗೇರಿ ಗುರುಸಿದ್ದಪ್ಪ, ನೀಲಗುಂದ ಮಹಾಂತೇಶ್ ಸೇರಿದಂತೆ ಇತರರು ಇದ್ದರು.