ದಾವಣಗೆರೆ, ಜ.13- ರಸ್ತೆ ಸುರಕ್ಷಾ ಸಪ್ತಾಹದ ಅಂಗವಾಗಿ ಜಿಲ್ಲಾ ಪೊಲೀಸ್ ಹಾಗೂ ಎಸ್.ಎಸ್.ಕೇರ್ ಟ್ರಸ್ಟ್ ವತಿಯಿಂದ ನಗರದ ಆಟೋ ಚಾಲಕರುಗಳಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವು ಇಂದು ನಡೆಯಿತು.
ಪಿ.ಜೆ.ಬಡಾವಣೆಯಲ್ಲಿರುವ ಡಿಎಆರ್ ಕಛೇರಿಯ ಆವರಣದಲ್ಲಿರುವ ಪೊಲೀಸ್ ಸಾಂಸ್ಕೃತಿಕ ಭವನದಲ್ಲಿ ಆಯೋಜಿಸಲಾಗಿದ್ದ ಶಿಬಿರವನ್ನು ಎಸ್ಪಿ ಉಮಾ ಪ್ರಶಾಂತ್ ಹಾಗೂ ಎಸ್ಎಸ್ ಟ್ರಸ್ಟ್ ಕೇರ್ನ ಡಾ.ಪ್ರಭಾ ಮಲ್ಲಿಕಾರ್ಜುನ್ ಉದ್ಘಾಟಿಸಿದರು.
ನೇತ್ರ ಶಾಸ್ತ್ರಜ್ಞರು, ಮೂಳೆ ತಜ್ಞರು, ಚರ್ಮರೋಗ ತಜ್ಞರು ಮತ್ತು ಶ್ವಾಸಕೋಶ ಶಾಸ್ತ್ರಜ್ಞರು ಆರೋಗ್ಯ ತಪಾಸಣೆ ನಡೆಸಿದರು. ಪ್ರಥಮ ಚಿಕಿತ್ಸೆ, ಅಪಘಾತಗಳು ಮತ್ತು ತುರ್ತು ಪರಿಸ್ಥಿತಿಗಳ ಕುರಿತು ಆರೋಗ್ಯ ಶಿಕ್ಷಣ ನೀಡಲಾಯಿತು.
ಎಸ್ಪಿ ಉಮಾ ಪ್ರಶಾಂತ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಡಯಾಬಿಟಿಸ್, ಬಿಪಿ, ಹೈಪರ್ ಟೆನ್ಷನ್ ಎಲ್ಲರಲ್ಲೂ ಹೆಚ್ಚಾಗುತ್ತಿದೆ. ಎಲ್ಲರಿಗೂ ಒತ್ತಡ ಇರುತ್ತದೆ. ನಿಮ್ಮ ಒತ್ತಡಗಳನ್ನು ಬದಿಗೊತ್ತಿ ಆರೋಗ್ಯದ ಕಡೆ ಆಟೋ ಚಾಲಕರು ಗಮನ ಹರಿಸಬೇಕು. ಆಟೋ ಚಾಲನೆ ಮಾಡುವಾಗ ರಸ್ತೆ ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದರು.
ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ ಪ್ರಾಸ್ತಾವಿಕ ವಾಗಿ ಮಾತನಾಡಿದರು. ಡಿವೈಎಸ್ಪಿ ಪಿ.ಬಿ. ಪ್ರಕಾಶ್ ಸ್ವಾಗತಿಸಿದರು. ಸಂಚಾರ ಪೊಲೀಸ್ ನಿರೀಕ್ಷಕ ನಲ ವಾಗಲು ಮಂಜುನಾಥ್ ನಿರೂಪಿಸಿದರು. ಹೆಚ್ಚುವರಿ ಪೊಲೀಸ್ ಅಧೀಕ್ಷಕ ಮಂಜುನಾಥ್ ವಂದಿಸಿದರು.