ಮಲೆಬೆನ್ನೂರು, ಜ.13- ಸರ್ವರನ್ನು ಸಮಾನ ವಾಗಿ ಕಂಡ ಸಿದ್ದಾರೂಢರು ಭಕ್ತಿಯಿಂದ ನಡೆದು ಕೊಳ್ಳುವ ಭಕ್ತರನ್ನು ಉದ್ಧಾರ ಮಾಡಿದ್ದಾರೆ ಎಂದು ಯೋಗಾನಂದ ಸ್ವಾಮೀಜಿಯವರು ಹೇಳಿದರು.
ಯಲವಟ್ಟಿ ಗ್ರಾಮದ ಗುರು ಸಿದ್ದಾಶ್ರಮದಲ್ಲಿ ಹಮ್ಮಿಕೊಂಡಿದ್ದ ಅಮಾವಾಸ್ಯೆಯ ಸತ್ಸಂಗ ಕಾರ್ಯ ಕ್ರಮದ ದಿವ್ಯಸಾನ್ನಿಧ್ಯ ವಹಿಸಿ ಮಾತನಾಡಿದರು.
ಕರುಣೆ ಇದ್ದಲ್ಲಿ ಧರ್ಮ ಇರುತ್ತದೆ ಎಂದು ಬಲವಾಗಿ ಬೋಧಿಸಿದ ಸಿದ್ದಾರೂಢರು ತಮಗೆ ಕೆಟ್ಟದನ್ನು ಮಾಡಿದವರಿಗೆ ಒಳ್ಳೆಯದನ್ನೇ ಮಾಡಿದ ಮಹಾನ್ ತ್ಯಾಗಿಯಾಗಿದ್ದರು. ಅವರ ಪ್ರೇರಣೆ ಮತ್ತು ಭಕ್ತಿ ತೋರುವ ಭಕ್ತರನ್ನು ಈಗಲು ಕಾಪಾಡುತ್ತಾರೆ ಎಂದರು.
ಸಿರಿಗೆರೆ ಸಿದ್ದೇಶ್ ಪ್ರಾಸ್ತಾವಿಕವಾಗಿ ಮಾತನಾಡಿ ಪ್ರಪಂಚದ ಮೇಲೆ ವೈರಾಗ್ಯ ಬೇಡ, ಅಹಂಕಾರದಿಂದ ಭಗವಂತ ಒಲಿಯಲ್ಲ, ಆಸೆ ಕಡಿಮೆ ಮಾಡಿಕೊಂಡು ನಿಷ್ಕಲ್ಮಶ ಭಾವದಿಂದ ಮನಸ್ಸನ್ನು ಶುದ್ಧಿ ಮಾಡಿಕೊಂಡು ಭಗವಂತನ ಚಿಂತನೆ ಮಾಡಿದಾಗ ಮಾತ್ರ ಆತನ ಸ್ವರೂಪಿಗಳಾಗಲು ಸಾಧ್ಯ ಎಂದರು. ವೇದಮೂರ್ತಿ ಶರಣಪ್ಪಯ್ಯ ಮಾತನಾಡಿ ಮಠದ ಸತ್ಸಂಗ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.
ಗ್ರಾಮದ ನಿವೃತ್ತ ಯೋಧ ಹೆಚ್. ಶಿವಕುಮಾರ್ ಮತ್ತು ಶ್ವೇತಾ ದಂಪತಿಗಳು ದಾಸೋಹ ದಾನಿಗಳಾಗಿದ್ದರು.
ನಿವೃತ್ತ ಶಿಕ್ಷಕ ಜಿ. ಬಸಪ್ಪ ಮೇಷ್ಟ್ರು, ಮಾಗೋಡು ಸಿದ್ದಣ್ಣ, ಹೊಸಮನಿ ಮಲ್ಲಪ್ಪ, ಸುರೇಶ್, ಶಿಕ್ಷಕ ಬಸಯ್ಯ ಮಠದ್, ಬಾವಿಕಟ್ಟಿ ಮಲ್ಲೇಶಪ್ಪ, ಜಿಗಳಿ ಹಾಗೂ ಯಲವಟ್ಟಿಯ ಭಜನಾ ಸಂಘದ ಕಲಾವಿದರು ಭಾಗವಹಿಸಿದ್ದರು, ಕುಂಬಳೂರಿನ ಕೆ. ಕುಬೇರಪ್ಪ ಪ್ರಾರ್ಥಿಸಿದರು, ಸಿಇಒ ಶೇಖರಪ್ಪ ಸ್ವಾಗತಿಸಿದರು.