ಗ್ಲಾಸ್‌ಹೌಸ್‌ನಲ್ಲಿ ನೆರೆದ ಜನರ ದಂಡು

ದಾವಣಗೆರೆ, ಜ. 15 – ಪವಿತ್ರ ಉತ್ತರಾಯಣಕ್ಕೆ ಪ್ರವೇಶಿಸುವ, ಕಡು ಚಳಿಯು ಅಂತ್ಯವಾಗಿ ಸೂರ್ಯದೇವ ಪ್ರಕಾಶಿಸುವ, ಎಳ್ಳು – ಬೆಲ್ಲ ಸವಿದು ಸಂಭ್ರಮಿಸುವ ಸಂಕ್ರಾಂತಿ ಹಬ್ಬವನ್ನು ನಗರದಲ್ಲಿ ಸಡಗರ- ಸಂಭ್ರಮದಿಂದ ಆಚರಿಸಲಾಯಿತು.

ಸಿಹಿ ಹಾಗೂ ಖಾರದ ಪೊಂಗಲ್ ತಯಾರಿಸಿಕೊಂಡು ಕುಟುಂಬ ಸಮೇತರಾಗಿ ನಗರದ ಪಾರ್ಕ್‌ಗಳಿಗೆ ತೆರಳಿ ಸಂಭ್ರಮದಿಂದ ಮಧ್ಯಾಹ್ನದ ಭೋಜನ ಸವಿದ ದೃಶ್ಯಗಳು ಕಂಡು ಬಂದವು. ಮಕ್ಕಳಂತೂ ಅಮಿತೋತ್ಸಾಹದಿಂದ ಪಾರ್ಕುಗಳಲ್ಲಿ ಆಟಗಳಲ್ಲಿ ಪಾಲ್ಗೊಂಡಿದ್ದರು.

ನಗರದ ಗಾಜಿನ ಮನೆಯಲ್ಲಿ ಅಪಾರ ಸಂಖ್ಯೆಯಲ್ಲಿ ಜನರು ಸೇರಿದ್ದರು. ಗಾಜಿನ ಮನೆ ತುಂಬಾ ಹಬ್ಬದ ಬುತ್ತಿ ಕಟ್ಟಿಕೊಂಡು ಬಂದಿದ್ದವರ ದಂಡೇ ನೆರೆದಿತ್ತು. ಸಾಮಾನ್ಯ ದಿನಗಳಲ್ಲಿ 300-500 ಜನರು ಗಾಜಿನ ಮನೆಗೆ ಬರುತ್ತಾರೆ. ಸಂಕ್ರಾಂತಿಯ ದಿನದಂದು ಮಧ್ಯಾಹ್ನದ ವೇಳೆ 5 ಸಾವಿರಕ್ಕೂ ಹೆಚ್ಚು ಜನರು ಆಗಮಿಸಿದ್ದಾರೆ ಎಂದು ಅಲ್ಲಿನ ಅಧಿಕಾರಿಗಳು ಹೇಳಿದರು.

ಸಂಜೆಯವರೆಗೆ ಗಾಜಿನ ಮನೆಗೆ 3,836 ಜನ ಹಿರಿಯರು ಹಾಗೂ 1,069 ಮಕ್ಕಳು ಭೇಟಿ ನೀಡಿದ್ದಾರೆ. ಒಂದೇ ದಿನದಲ್ಲಿ ಒಟ್ಟು 87,610 ರೂ.ಗಳ ಪ್ರವೇಶ ಶುಲ್ಕ ಸಂಗ್ರಹವಾಗಿದೆ. 

ಸೂರ್ಯ ದೇವನು ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ಮಕರ ರಾಶಿಯನ್ನು ಪ್ರವೇಶಿಸುವ ದಿನವೇ ಮಕರ ಸಂಕ್ರಾಂತಿ ಎಂದು ಐತಿಹ್ಯ ಇದೆ. ಈ ಸಮಯವು ರೈತರು ಸುಗ್ಗಿ ಸಂಭ್ರಮದಲ್ಲಿ ತೊಡಗುವ ಸಂದರ್ಭದಲ್ಲೇ ಬರುತ್ತದೆ. ಅಲ್ಲದೇ ಈ ಹಬ್ಬದ ನಂತರವೇ ಹಿಂದೂ ಸಮುದಾಯದ ಪ್ರಮುಖ ಹಬ್ಬಗಳು ಹಾಗೂ ಜಾತ್ರೆಗಳು ಸಾಲಾಗಿ ಬರುತ್ತವೆ. ಈ ಎಲ್ಲ ಕಾರಣದಿಂದಾಗಿ ಸಂಕ್ರಾಂತಿಯು ಅಪಾರ ಪ್ರಾಮುಖ್ಯತೆ ಪಡೆದಿದೆ.

ಎಳ್ಳು ಬೆಲ್ಲವನ್ನು ಸವಿದು ಒಳ್ಳೆಯ ಮಾತನಾಡಬೇಕೆಂಬ ಪ್ರತೀತಿ ಇದೆ. ಸೂರ್ಯ ತನ್ನ ಪಥ ಬದಲಿಸುವ ರೀತಿಯಲ್ಲೇ ಜೀವನವೂ ತನ್ನ ಪಥ ಬದಲಿಸಿ ಒಳ್ಳೆಯ ವಿಚಾರಗಳು ಎಲ್ಲೆಡೆ ಹರಡಲಿ ಎಂಬುದೇ ಈ ನಾಣ್ನುಡಿಯ ಸಾರವಾಗಿದೆ.

error: Content is protected !!