ಹಬ್ಬ ಹರಿದಿನಗಳಿಗೆ ವೈಜ್ಞಾನಿಕ ನೆಲೆಗಟ್ಟಿದೆ

ಹಬ್ಬ ಹರಿದಿನಗಳಿಗೆ ವೈಜ್ಞಾನಿಕ ನೆಲೆಗಟ್ಟಿದೆ

ಹರಪನಹಳ್ಳಿ : ಸಂಕ್ರಾಂತಿ ಕಾರ್ಯಕ್ರಮದಲ್ಲಿ ಶಾಸಕರಾದ ಎಂ.ಪಿ.ಲತಾ ಮಲ್ಲಿಕಾರ್ಜುನ್

ಹರಪನಹಳ್ಳಿ, ಜ. 15 – ನಮ್ಮ ಪೂರ್ವಿಕರು ಹಬ್ಬ ಹರಿದಿನಗಳನ್ನು ವೈಜ್ಞಾನಿಕ ನೆಲೆಗಟ್ಟಿನಲ್ಲಿ ಸಂಪ್ರದಾಯಗಳನ್ನು ರೂಢಿ ಮಾಡಿದ್ದಾರೆ ಅವುಗಳನ್ನು ಮುಂದಿನ ಪೀಳಿಗೆಯು ಆಚರಣೆ ಮಾಡುವ ಸಂಸ್ಕೃತಿಯನ್ನು ನಾವು ಮಕ್ಕಳಲ್ಲಿ ಬೆಳೆಸಬೇಕಿದೆ ಎಂದು ಶಾಸಕರಾದ ಎಂ.ಪಿ. ಲತಾ ಮಲ್ಲಿಕಾರ್ಜುನ್ ಹೇಳಿದರು. 

ತಾಲ್ಲೂಕಿನ ಹಲುವಾಗಲು ಗ್ರಾಮದ ತುಂಗಭದ್ರಾ ನದಿಯ ರಾಗಿ-ಹೊಳಿ ಬಳಿ ಪ್ರತಿ ವರ್ಷದಂತೆ ಮಕರ ಸಂಕ್ರಾಂತಿ ಹಬ್ಬವನ್ನು ಸೋಮವಾರ ಎಳ್ಳು,ಬೆಲ್ಲ ಬೀರಿ ಸಾಮೂಹಿಕ ರೊಟ್ಟಿ ಊಟದ ಸವಿಯೊಂದಿಗೆ ಆಚರಿಸಿ ಅವರು ಮಾತನಾಡಿದರು. 

ಪ್ರತಿ ಹಬ್ಬಗಳಲ್ಲಿ ವಿಶಿಷ್ಟ ರೀತಿಯ ಭಕ್ಷ್ಯಗಳನ್ನು ತಯಾರಿಸಿ ನೈವೇದ್ಯ ಮಾಡುವ ಪರಿಪಾಠ ನಮ್ಮಲ್ಲಿ ಚಾಲ್ತಿಯಲ್ಲಿದೆ. ಪ್ರಮುಖವಾಗಿ ಸಂಕ್ರಾಂತಿ ಹಬ್ಬ ಚಳಿಗಾಲ ಮುಗಿಸಿ ಬೇಸಿಗೆ ಕಾಲಕ್ಕೆ ಪಾರ್ದಾಪಣೆ ಮಾಡುವ ಕಾಲ. 

ಈ ಹಬ್ಬದಲ್ಲಿ ಎಳ್ಳು-ಬೆಲ್ಲ ಹಂಚಿ ಆಚರಣೆ ಮಾಡುವುದರಲ್ಲಿ ವೈಜ್ಞಾನಿಕ ಮಹತ್ವವಿದೆ. ಹಿರಿಯ ಸಂಪ್ರದಾಯಗಳನ್ನು ಉಳಿಸಿ-ಬೆಳೆಸಲು ಇಂತಹ ಹಬ್ಬ ಹರಿದಿನಗಳನ್ನು ಸಾಮೂಹಿಕವಾಗಿ ಆಚರಣೆ ಮಾಡೋಣ ಎಂದರು. 

ಟಿ.ವಿ. ಮೊಬೈಲ್‌ಗಳ ದಾಸ್ಯದಿಂದ ಹೊರಗೆ ಬರಬೇಕಾಗಿದೆ. ವೈಯಕ್ತಿಕ ದ್ವೇಷ, ನಿಂದನೆಯಿಂದ ಮನಸ್ಸುಗಳನ್ನು ಗೆಲ್ಲಲು ಸಾಧ್ಯವಿಲ್ಲ. ಪ್ರೀತಿ ವಾತ್ಸಲ್ಯಗಳಿಂದ ಎಲ್ಲರನ್ನು ಜಯಿಸಬೇಕಾಗಿದೆ ಎಂದರು. ಸಂಕ್ರಾತಿ ಹಬ್ಬದಾಚರಣೆಗೆ ಆಗಮಿಸಿದ ಎಲ್ಲಾರಿಗೂ ಎಳ್ಳು-ಬೆಲ್ಲ ನೀಡಿ ಸ್ವಾಗತಿಸಿದ್ದು ವಿಶೇಷವಾಗಿತ್ತು. 

ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಕೋತಬಾಳ ಗ್ರಾಮದ ಅರುಣೋದಯ ಕಲಾ ತಂಡದ ಶಂಕರಣ್ಣ, ಸಂಕಣ್ಣನವರ್‌ ನೇತೃತ್ವದಲ್ಲಿ 14 ಜನರು ಜಾನಪದ ಹಾಡು, ಜನಪದ ನೃತ್ಯ, ಸುಗ್ಗಿ ನೃತ್ಯ, ದೀಪದ ನೃತ್ಯ, ಕಾಡು ನೃತ್ಯ ನೆರೆದ ಪ್ರೇಕ್ಷಕರಿಗೆ ಮುದ ನೀಡಿದವು.

ಜಾತಿ, ಜಾತಿ ಅಂತ ಜಗಳ ಮಾಡುತ್ತೀರಿ ಎಂಬ ಕೋರಿಯೋಗ್ರಪಿ ಸಹ ಉತ್ತಮವಾಗಿತ್ತು ಒಟ್ಟಿನಲ್ಲಿ ತುಂಗಭದ್ರಾ ನದಿ ತೀರದಲ್ಲಿ ಜಾನಪದ ರಸದೌತಣ ಸಂಕ್ರಾಂತಿ ಹಬ್ಬದ ಆಚರಣೆಗೆ ರಂಗು ನೀಡಿತ್ತು.

ಮುಖಂಡರಾದ ಎಚ್‌.ಎಂ. ಮಲ್ಲಿಕಾರ್ಜುನ, ಪುರಸಭಾ ಸದಸ್ಯರುಗಳಾದ ಎಂ.ವಿ. ಅಂಜಿನಪ್ಪ, ಗೊಂಗಡಿ ನಾಗರಾಜ, ಲಾಟಿ ದಾದಾಪೀರ, ಉದ್ದಾರ ಗಣೇಶ, ಟಿ. ವೆಂಕಟೇಶ, ಡಿವೈಎಸ್ಪಿ ವೆಂಕಟಪ್ಪ ನಾಯಕ, ಸಿಪಿಐ ಎಂ. ನಾಗರಾಜ ಕಮ್ಮಾರ, ಪಿಎಸ್‌ ಐ ನಾಗರತ್ನ ಹಾಗೂ ತಾ.ಪಂ. ಮಾಜಿ ಅಧ್ಯಕ್ಷ ಕುಬೇರಗೌಡ, ವಸಂತಪ್ಪ, ವೈ.ಕೆ.ಬಿ. ದುರುಗಪ್ಪ, ಎಂ.ಪಿ. ನಾಯ್ಕ, ಎಲ್‌.ಬಿ. ಹಾಲೇಶನಾಯ್ಕ, ಕನಕನ ಬಸ್ಸಾಪುರ ಮಂಜುನಾಥ, ಮೇಘರಾಜ, ಮತ್ತೂರು ಬಸವರಾಜ, ಪ್ರದೀಪಗೌಡ, ಮೈದೂರು ರಾಮಣ್ಣ, ಕೆ.ಎಂ. ಬಸವರಾಜಯ್ಯ, ಎಚ್‌.ಎಂ.ಕೊಟ್ರಯ್ಯ, ಎಂ. ಶಂಕರ, ಸಣ್ಣ ಹಾಲಪ್ಪ, ಚಿರಸ್ಥಹಳ್ಳಿ ಮಲ್ಲಿಕಾರ್ಜುನ ಕಲ್ಮಠ, ಅಗ್ರಹಾರ ಅಶೋಕ, ಉದಯ ಶಂಕರ, ಕಡಬಗೇರಿ ಮಲ್ಲಿಕಾರ್ಜುನಗೌಡ, ಶೆಕ್‌ ಷಾ ವಲಿ, ಕಂಚಿಕೇರಿ ಜಯಲಕ್ಷ್ಮಿ, ನೇತ್ರಾವತಿ, ಉಮಾ, ಕವಿತಾ ಸುರೇಶ, ಬೆನ್ನೂರು ಶಶಿಧರ ಸೇರಿದಂತೆ ಅನೇಕರು ಹಾಜರಿದ್ದರು.

error: Content is protected !!