ದಾವಣಗೆರೆ, ಜ. 15- ಸಂಸದ ಜಿ.ಎಂ. ಸಿದ್ದೇಶ್ವರ ಅವರು ಕಳೆದ 8-10 ವರ್ಷಗಳಿಂದ 500 ಕೋಟಿ ಹವಾಲಾ ಹಗರಣ ನಡೆಸಿದ್ದಾರೆಂಬ ಆರೋಪದ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ (ಇಡಿ) ತನಿಖೆ ನಡೆಸುವಂತೆ ಒತ್ತಾಯಿಸಿ ನಾಳೆ ದಿನಾಂಕ 16 ರ ಮಂಗಳವಾರ ಬೆಳಿಗ್ಗೆ 10 ಗಂಟೆಗೆ ನಗರದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ. ಮಂಜಪ್ಪ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅಂಬೇಡ್ಕರ್ ವೃತ್ತದಲ್ಲಿನ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಮೆರವಣಿಗೆ ಮೂಲಕ ಆದಾಯ ತೆರಿಗೆ ಇಲಾಖೆಯ ಕಾರ್ಯಾಲಯಕ್ಕೆ ತೆರಳಿ ಮನವಿ ಸಲ್ಲಿಸಲಾಗುವುದು ಎಂದರು.
ಮೂವತ್ತು ಪೈಸೆ ಕಮೀಷನ್ಗಾಗಿ ಹಲವಾರು ವರ್ಷಗಳಿಂದ ನನ್ನ ಕಾರಿ ನಲ್ಲೇ ಹವಾಲಾ ಹಣವನ್ನು ಸಾಗಿಸುತ್ತಿದ್ದೆ ಎಂಬುದಾಗಿ ಕಾರು ಚಾಲಕ ಸ್ವಾಮಿ ಮತ್ತು ಅನುಪಮ ಎಂಬುವರು ಬೆಂಗ ಳೂರಿನ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಸಲ್ಲಿಸಿರುವ ದೂರಿನ ಬಗ್ಗೆ ತನಿಖೆ ನಡೆಸಬೇಕೆಂದು ಒತ್ತಾಯಿಸಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಸಂಸದ ಸಿದ್ದೇಶ್ವರ ಅವರೇ ಹವಾಲಾ ಹಗರಣದಲ್ಲಿ ತೊಡಗಿದ್ದಾರೆ ಎಂದು ನಾವೇನು ಆರೋಪ ಮಾಡುತ್ತಿಲ್ಲ. ಖಾಸಗಿ ಕಾರು ಚಾಲಕ ನೀಡಿರುವ ದೂರಿನ ಬಗ್ಗೆ ಜಾರಿ ನಿರ್ದೇಶನಾಲಯದಿಂದ ಸಮಗ್ರ ತನಿಖೆ ನಡೆಸಬೇಕೆಂಬುದು ನಮ್ಮ ಆಗ್ರಹ ಎಂದರು.
ಪ್ರತಿಭಟನೆ ಸಂದರ್ಭದಲ್ಲಿ ತಮ್ಮ ವಿರುದ್ಧ ಆಧಾರ ರಹಿತ ಆರೋಪ ಮಾಡುವಂತಹವರ ವಿರುದ್ಧ ಮಾನ ನಷ್ಟ ಮೊಕದ್ದಮೆ ದಾಖಲು ಮಾಡ ಲಾಗುವುದು ಎಂದು ಸಿದ್ದೇಶ್ವರ ಹೇಳಿ ದ್ದಾರೆ. ಕಾನೂನಿನಲ್ಲಿ ಅವಕಾಶವಿದ್ದರೆ ದಾಖಲಿಸಲಿ. ನಾವೂ ಸಹ ಮೊಕದ್ದಮೆ ಎದುರಿಸಲು ಸಿದ್ಧರಿದ್ದೇವೆ. ನಾವೇನು ಆರೋಪ ಮಾಡುತ್ತಿಲ್ಲ. ಕಾರು ಜಾಲಕ ಸ್ವಾಮಿ ನೀಡಿರುವ ದೂರಿನ ಹಿನ್ನೆಲೆಯಲ್ಲಿ ತನಿಖೆಗೆ ಆಗ್ರಹಿಸುತ್ತಿದ್ದೇವೆ ಎಂದು ಹೇಳಿದರು.
ಸಿದ್ದೇಶ್ವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪ್ರಕರಣವನ್ನು ಕೆಪಿಸಿಸಿ ಮುಖಂಡರ ಗಮನಕ್ಕೆ ತರಲಾಗುವುದು. ರಾಜ್ಯಮಟ್ಟದಲ್ಲೂ ಅವರ ವಿರುದ್ಧ ಹೋರಾಟ ನಡೆಸಲಾಗುವದು. ಅವರು ತಪ್ಪೇ ಮಾಡದಿದ್ದಲ್ಲಿ ಭಯಪಡುವ ಅಗತ್ಯವಿಲ್ಲ. ಸಮಗ್ರ ತನಿಖೆ ಮೂಲಕ ಸತ್ಯಾಂಶ ಬೆಳಕಿಗೆ ಬರಲಿ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳಾದ ದಿನೇಶ್ ಕೆ. ಶೆಟ್ಟಿ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಅನಿತಾಬಾಯಿ ಮಾಲತೇಶರಾವ್ ಜಾಧವ್, ಕೆ.ಜಿ. ಶಿವಕುಮಾರ್, ಎಲ್.ಹೆಚ್. ಸಾಗರ್, ಅಯೂಬ್ ಪೈಲ್ವಾನ್, ಕೆ. ಚಮನ್ ಸಾಬ್ ಉಪಸ್ಥಿತರಿದ್ದರು.